ಹೆಚ್ಚಿದ ಭಯೋತ್ಪಾದನೆ ದಾಳಿಗಳು: ಕಾಶ್ಮೀರ ತೊರೆದ ಪಂಡಿತರ ಕುಟುಂಬಗಳು
ಶೋಪಿಯಾನ್, ಅಕ್ಟೋಬರ್ 26: ಕಾಶ್ಮೀರದಲ್ಲಿ ಪಂಡಿತರನ್ನು ಗುರಿಯಾಗಿಸಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ಸಂಖ್ಯೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರ ಕುಟುಂಬಗಳು ಕಣಿವೆ ರಾಜ್ಯವನ್ನು ತೊರೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ವರದಿ ಮಾಡಿರುವ 'ಎನ್‌ಡಿಟಿವಿ', ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿ ಇತ್ತೀಚೆಗೆ ದಾಳಿಗಳು ಹೆಚ್ಚುತ್ತಿವೆ. ಈ ಸಮುದಾಯಕ್ಕೆ ಸೇರಿದ ಕನಿಷ್ಠ 10 ಕುಟುಂಬಗಳು ಸದ್ದಿಲ್ಲದೆ ಕಾಶ್ಮೀರ ಕಣಿವೆಯನ್ನು ತೊರೆದು ಜಮ್ಮುವಿಗೆ ಸ್ಥಳಾಂತರಗೊಂಡಿವೆ ಎಂದು ಹೇಳಿದೆ.
ಈ ಕುಟುಂಬಗಳು ಶೋಪಿಯಾನ್ ಜಿಲ್ಲೆಯ ಚೌಧರಿಗುಂಡ್ ಮತ್ತು ಚೋಟಿಗಮ್ ಗ್ರಾಮಗಳಲ್ಲಿ ಉಳಿದುಕೊಂಡಿದ್ದವು. ಕಳೆದ ಎರಡು ತಿಂಗಳುಗಳಲ್ಲಿ ಇಬ್ಬರು ಪಂಡಿತರು ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಿದ್ದಾರೆ. ಈ ಕಾರಣಕ್ಕಾಗಿ ಪಂಡಿತರ ಕುಟುಂಬಗಳು ಕಾಶ್ಮೀರವನ್ನು ತೊರೆಯುತ್ತಿವೆ.

ಅವರ ಮನೆಗಳಿಗೆ ಈಗ ಬೀಗ ಹಾಕಲಾಗಿದೆ. ಚೌಧರಿ ಗುಂಡದಲ್ಲಿ ಒಬ್ಬ ಪಂಡಿತ ಮಹಿಳೆ ಮಾತ್ರ ಉಳಿದಿದ್ದಾರೆ. ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಗ ಉಳಿದಿರುವ ಮಹಿಳೆಯು ಕಾಶ್ಮೀರವನ್ನು ತೊರೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 15 ರಂದು ಇದೇ ಗ್ರಾಮದ ಪುರಾನ್ ಕ್ರಿಶನ್ ಭಟ್ ಎಂಬ ಪಂಡಿತರೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಪುರಾನ್ ಭಟ್ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದರು. ಆ ಮನೆಯ ಎದುರಿಗೇ ಅವರನ್ನು ಹತ್ಯೆ ಮಾಡಲಾಗಿತ್ತು.
ಅಕ್ಟೋಬರ್ 18 ರಂದು ಇಬ್ಬರು ವಲಸೆ ಕಾರ್ಮಿಕರಾದ ಮನಿಶ್ ಕುಮಾರ್ ಮತ್ತು ರಾಮ ಸಾಗರ್ ಎಂಬುವವರನ್ನು ಹತ್ಯೆಗೈಯಲಾಗಿತ್ತು. ಶೋಪಿಯಾನ್‌ನಲ್ಲಿನ ತಮ್ಮ ಬಾಡಿಗೆ ನಿವಾಸದಲ್ಲಿ ಮಲಗಿದ್ದಾಗ ಗ್ರೆನೇಡ್ ದಾಳಿಯಲ್ಲಿ ಮಾಡಿ ಅವರನ್ನು ಕೊಲ್ಲಲಾಗಿತ್ತು.
ಶೋಪಿಯಾನ್ ಜಿಲ್ಲೆಯ ಸೇಬಿನ ತೋಟದಲ್ಲಿ ಕಾಶ್ಮೀರಿ ಪಂಡಿತನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದ ಕೆಲವೇ ವಾರಗಳಲ್ಲಿ ಈ ಘಟನೆಗಳು ಸಂಭವಿಸಿವೆ. ಇದೇ ಗುಂಡಿನ ದಾಳಿಯಲ್ಲಿ ಆತನ ಸಹೋದರನೂ ಗಾಯಗೊಂಡಿದ್ದಾನೆ.
ಇಂತಹ ಇನ್ನಷ್ಟು ಹಿಂಸಾಚಾರಕ್ಕೆ ಭಯೋತ್ಪಾದಕರು ಯೋಜನೆ ರೂಪಿಸಿದ್ದಾರೆ ಎಂದು ಸರ್ಕಾರ ಹೇಳಿದೆ. ಆ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು ತಮ್ಮ ನೆಲೆಯನ್ನು ತೊರೆದು ಹೊರ ಹೋಗಿದ್ದಾರೆ ಎಂದು ವರದಿಯಾಗಿದೆ.
'35 ರಿಂದ 40 ಕಾಶ್ಮೀರಿ ಪಂಡಿತರನ್ನು ಒಳಗೊಂಡ ಹತ್ತು ಕುಟುಂಬಗಳಲ್ಲಿ ಆತಂಕ ಮನೆ ಮಾಡಿತ್ತು. ಆ ಕಾರಣ, ಅವರೆಲ್ಲರೂ ನಮ್ಮ ಗ್ರಾಮದಿಂದ ವಲಸೆ ಹೋಗಿದ್ದಾರೆ' ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಈ ಮಾಹಿತಿ ನೀಡಿದ ವ್ಯಕ್ತಿಯೂ ಇತ್ತೀಚೆಗೆ ಕೊಲೆ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ 'ಪಿಟಿಐ' ಹೇಳಿದೆ.
'ನಾವು ಕಣಿವೆಯಲ್ಲಿ ವಾಸಿಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ. ಹತ್ಯೆಗಳಿಂದ ಭಯದಲ್ಲಿ ಬದುಕುತ್ತಿದ್ದೇವೆ. ನಮಗೆ ಭದ್ರತೆ ಇಲ್ಲ' ಎಂದು ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದಾರೆ.
ಪದೇ ಪದೇ ರಕ್ಷಣೆ ಕೋರಿದ್ದೇವೆ. ಆದರೆ, ಪೊಲೀಸ್ ಠಾಣೆಯನ್ನು ತಮ್ಮ ಗ್ರಾಮದಿಂದ ದೂರ ನಿರ್ಮಿಸಲಾಗಿದೆ. ನಾವು ಬೆಳೆದ ಸೇಬಿನ ಕೊಯ್ಲು ಕೂಡ ಮಾಡಲು ಭಯವಾಗುತ್ತಿದೆ. ಕೆಲವರು ಎಲ್ಲವನ್ನೂ ತಮ್ಮ ಮನೆಗಳಲ್ಲಿ ಬಿಟ್ಟು ಹೊರ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಜಮ್ಮುವಿಗೆ ತೆರಳಿದವರು ತಮ್ಮ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಆರ್ಟಿಕಲ್ 370 ಅನ್ನು ಹಿಂಪಡೆದುಕೊಂಡಿದೆ. ಆಗಿನಿಂದ ಕಾಶ್ಮೀರದಲ್ಲಿ ಉಗ್ರವಾದದ ಕೃತ್ಯಗಳು ಹೆಚ್ಚಿವೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಾದ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ.
ಇಷ್ಟೆಲ್ಲ ನಡೆದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಆತಂಕದಲ್ಲೇ ದಿನ ದೂಡಬೇಕಿದೆ ಎಂದು ಕಾಶ್ಮೀರಿ ಪಂಡಿತರು ಆರೋಪ ಮಾಡಿದ್ದಾರೆ.












Click it and Unblock the Notifications