ಗಡಿಯಲ್ಲಿ ಪಾಕ್ ಗುಂಡಿನ ದಾಳಿ, 9 ಸಾವು
ನವದೆಹಲಿ, ಅ.6 : ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ 9 ಜನರು ಸಾವನ್ನಪ್ಪಿದ್ದು, 26 ಜನರು ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನಲ್ಲಿ ಭಾನುವಾರ ರಾತ್ರಿಯಿಂದ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸುತ್ತಿದ್ದು, ಕದನ ವಿರಾಮವನ್ನು ಉಲ್ಲಂಘಿಸಿವೆ. ಬಿಎಸ್‌ಎಫ್ ಕಾವಲು ಠಾಣೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ಸೋಮವಾರ ಮುಂಜಾನೆಯೂ ದಾಳಿ ಮುಂದುವರೆದಿದೆ.

ಸೋಮವಾರ ಬೆಳಗ್ಗೆ 8 ಗಂಟೆಗೆ ಮೆಂಧಾರ್ ವಲಯದಲ್ಲಿ ಸುಮಾರು 30 ನಿಮಿಷಗಳ ಕಾಲ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿದೆ. ಭಾರತೀಯ ಯೋಧರು ಪ್ರತಿದಾಳಿ ನಡೆಸಿದಾಗ ನಾಲ್ವರು ಪಾಕ್ ಪ್ರಜೆಗಳು ಮೃತಪಟ್ಟಿದ್ದಾರೆ. ಈ ಗುಂಡಿನ ದಾಳಿಯಿಂದಾಗಿ 9 ಜನರು ಸಾವನ್ನಪ್ಪಿದ್ದರೆ, 26 ಜನರು ಗಾಯಗೊಂಡಿದ್ದಾರೆ.
ಮೂವರು ಉಗ್ರರ ಹತ್ಯೆ : ಇದೇ ವೇಳೆ ಜಮ್ಮು-ಕಾಶ್ಮೀರದ ತಂಗ್‌ಧರ್ ಬಳಿ ನಿಯಂತ್ರಣ ರೇಖೆಯಲ್ಲಿ ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಅಕ್ಟೋಬರ್ 1ರ ನಂತರ ಪಾಕ್ ಪಡೆಗಳು 10 ಬಾರಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ.
ಸಿಂಗ್ ಎಚ್ಚರಿಕೆ : ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಅದು ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸೈನಿಕರು ಕೂಡ ತಕ್ಕ ಪಾಠ ಕಲಿಸಲು ಹಿಂಜರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಉಂಟಾಗುತ್ತಿರುವ ಬದಲಾವಣೆ ಮತ್ತು ಇಲ್ಲಿನ ಪರಿಸ್ಥಿತಿಯನ್ನು ನೆರೆಯ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು. ಕದನ ವಿರಾಮ ಉಲ್ಲಂಘನೆ ಮಾಡಿ ಮುಗ್ಧ ನಾಗರಿಕರು ಹಾಗೂ ಸೈನಿಕರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.












Click it and Unblock the Notifications