ಆಪರೇಷನ್ ಗಂಗಾ; ಮುಂಬೈಗೆ ಹೊರಟ 7ನೇ ವಿಮಾನ
ನವದೆಹಲಿ, ಮಾರ್ಚ್ 01; ರಷ್ಯಾ- ಉಕ್ರೇನ್ ಶಾಂತಿ ಮಾತುಕತೆ ನಡುವೆಯೇ ಭಾರತ ಉಕ್ರೇನ್‌ನಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರ ಮಾಡುವ 'ಆಪರೇಷನ್ ಗಂಗಾ' ಕಾರ್ಯಾಚರಣೆಯನ್ನು ಮುಂದುವರೆಸಿದೆ.
ರೋಮಾನಿಯಾದ ರಾಜಧಾನಿ ಬುಚಾರೆಸ್ಟ್‌ನಿಂದ 182 ಭಾರತೀಯರು ಇರುವ ವಿಮಾನ ಟೇಕಾಫ್ ಆಗಿದೆ. ಆಪರೇಷನ್ ಗಂಗಾದ 7ನೇ ವಿಮಾನ ಇದಾಗಿದ್ದು, ಬುಚಾರೆಸ್ಟ್‌ನಿಂದ ವಿಮಾನ ಮುಂಬೈಗೆ ಆಗಮಿಸಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. "ಆಪರೇಷನ್ ಗಂಗಾ ಮುಂದುವರೆದಿದೆ. 182 ಭಾರತೀಯರು ಇರುವ 7ನೇ ವಿಮಾನ ಬುಚಾರೆಸ್ಟ್‌ನಿಂದ ಮುಂಬೈ ಹೊರಟಿದೆ" ಎಂದು ಹೇಳಿದ್ದಾರೆ.

ಉಕ್ರೇನ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ತುರ್ತು ಸಭೆ ನಡೆಸಿದರು. ಉನ್ನತಮಟ್ಟದ ಸಭೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ರಕ್ಷಣೆಗೆ ಹೇಗೆ ಕಾರ್ಯ ನಿರ್ವಹಣೆ ಮಾಡಬೇಕು? ಎಂದು ಸಲಹೆಗಳನ್ನು ನೀಡಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭಾರತೀಯರ ರಕ್ಷಣಾ ಕಾರ್ಯಾಚರಣೆಗಾಗಿ ನಾಲ್ವರು ಸಚಿವರ ತಂಡವನ್ನು ನಿಯೋಜನೆ ಮಾಡಿದ್ದು, ಅವರು ಅಲ್ಲಿಗೆ ತೆರಳಿ ಭಾರತೀಯರನ್ನು ಕರೆತರಲಿದ್ದಾರೆ.
ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾ ಮತ್ತು ಮೊಲ್ಡಾವಾದಲ್ಲಿ, ಕಿರಣ್ ರಿಜು ಸ್ವೋವಾಕಿಯಾದಲ್ಲಿ, ವಿ. ಕೆ. ಸಿಂಗ್ ಪೊಲೆಂಡ್‌ನಲ್ಲಿ, ಹರ್‌ದೀಪ್ ಸಿಂಗ್ ಪುರಿ ಹಂಗೇರಿಗೆ ತೆರಳಲಿದ್ದು, ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದ್ದಾರೆ.
ಫೆಬ್ರವರಿ 24ರಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿ ಸಭೆ ನಡೆಸಿದ್ದರು. ಉಕ್ರೇನ್ ಬಿಕ್ಕಟ್ಟು ಕುರಿತು ಈಗಾಗಲೇ ಪ್ರಧಾನಿ ಮೋದಿ ಮೂರು ಬಾರಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಅಕ್ಕಪಕ್ಕದ ದೇಶಗಳಿಗೆ ಆಗಮಿಸಬೇಕು. ವಿಶೇಷ ಏರ್ ಇಂಡಿಯಾ ವಿಮಾನದ ಮೂಲಕ ಅವರನ್ನು ಉಚಿತವಾಗಿ ಭಾರತಕ್ಕೆ ಕರೆತರಲಾಗುತ್ತಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಗಂಗಾ ಎಂದು ಹೆಸರು ಇಡಲಾಗಿದೆ.
ಸೋಮವಾರ ಭಾರತದ ವಿದೇಶಾಂಗ ಸಚಿವಾಲಯ ನೀಡಿದ ಮಾಹಿತಿಯಂತೆ ಆಪರೇಷನ್ ಗಂಗಾ ಅಡಿ ಇದುವರೆಗೂ 8000 ಜನರನ್ನು ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಉಕ್ರೇನ್‌ನಿಂದ ಪಲಾಯನ; ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾದ ಬಳಿಕ ಉಕ್ರೇನ್‌ನಿಂದ 5,00,000ಕ್ಕೂ ಹೆಚ್ಚು ನಿರಾಶ್ರಿತರು ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಟ್ವೀಟ್ ಮಾಡಿದ್ದಾರೆ.
ಯುಎನ್‌ಹೆಚ್‌ಸಿಆರ್ ಅಂದಾಜಿನ ಪ್ರಕಾರ ಉಕ್ರೇನ್‌ನಿಂದ 2,80,000ಕ್ಕಿಂತ ಹೆಚ್ಚು ಜನರು ಪೋಲೆಂಡ್ ದೇಶವೊಂದಕ್ಕೆ ಪಲಾಯನ ಮಾಡಿದ್ದಾರೆ. 85 ಸಾವಿರ ಜನರು ಹಂಗೇರಿಗೆ, 36,000 ಜನರು ಮಾಲ್ಡೊವಾಗೆ, 32,500 ಜನರು ರೊಮೇನಿಯಾಗೆ, 30,000 ಜನರು ಸ್ಲೋವಾಕಿಯಾಗೆ ಪಲಾಯನ ಮಾಡಿದ್ದಾರೆ.
ಉಕ್ರೇನ್ ದೇಶದ ನಾಗರಿಕರು ಮುಕ್ತವಾಗಿ ರಾಜಧಾನಿ ಕೀವ್‌ನಿಂದ ಹೊರಹೋಗಬಹುದು ಎಂದು ರಷ್ಯಾ ಸೇನೆ ಸೋಮವಾರ ಹೇಳಿದೆ. ಜನರು ಕೀವ್-ವಾಸಿಲ್ಕಿವ್ ಹೆದ್ದಾರಿ ಮೂಲಕ ಹೊರಹೋಗಬಹುದು. ಈ ದಾರಿ ಸುರಕ್ಷಿತವಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೋರ್ ಕೊನಾಶೆಂಕೋವ್ ಹೇಳಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭ ಮಾಡಿದ ಬಳಿಕ ಎರಡು ದೇಶಗಳ ಜೊತೆ ಮೊದಲ ಮಾತುಕತೆ ಸೋಮವಾರ ನಡೆದಿದೆ. ಬೆಲರೂಸ್ ಮತ್ತು ಉಕ್ರೇನ್ ಗಡಿಯಲ್ಲಿರುವ ಪ್ರದೇಶದಲ್ಲಿ ಸಭೆ ನಡೆಯಿತು. ತಕ್ಷಣ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಉಕ್ರೇನ್ ರಷ್ಯಾದ ಮೇಲೆ ಒತ್ತಡ ಹಾಕಿದೆ.
ಉಕ್ರೇನ್ ಬಿಕ್ಕಟ್ಟು ಬಗೆಹರಿಸಲು ಆ ದೇಶ ತಟಸ್ಥ ನಿಲುವು ತಳೆಯಬೇಕು. ಸೇನೆ ತ್ಯಜಿಸಬೇಕು. ನಾಜಿ ಮನಸ್ಥಿತಿಯನ್ನು ಬಿಡಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು. ಸೋಮವಾರದ ಮಾತುಕತೆ ಬಳಿಕವೂ ರಷ್ಯಾದ ದಾಳಿ ಮುಂದುವರೆದಿದೆ.












Click it and Unblock the Notifications