Toll Price: ಈಗಲೇ ಹೆಚ್ಚಾಗುವುದಿಲ್ಲ ಟೋಲ್ ದರ: ಗ್ರಾಹಕ ಕೆಲವು ತಿಂಗಳು ನಿರಾಳ
ಸಾಮಾನ್ಯವಾಗಿ ದೇಶದಲ್ಲಿ ಟೋಲ್‌ಗಳ ದರವನ್ನು ಏಪ್ರಿಲ್ 1ರಂದು ಪರಿಷ್ಕರಿಸಲಾಗುತ್ತದೆ. ಆದರೆ ಈ ಬಾರಿ ನಿಮ್ಮ ಜೇಬಿಗೆ ಕತ್ತರಿ ಬೀಳುವುದಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಭಾರತದಲ್ಲಿ ಲೋಕಸಭಾ ಚುನಾವಣೆಗಳು ಇರುವ ಕಾರಣ ಈ ನಿರ್ಧಾರವನ್ನು ಮುಂದೂಡುವಂತೆ ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ಈ ಬಾರಿ ಗ್ರಾಹಕರಿಗೆ ಟೋಲ್ ದರದ ಹೊರೆ ಕೆಲ ದಿನಗಳ ಕಾಲ್ ಕಡಿಮೆ ಆಗಲಿದೆ.
ದೇಶದಲ್ಲಿ ಚುನಾವಣೆಗಳು ಏಳು ಹಂತದಲ್ಲಿ ನಡೆಯಲಿದ್ದು, ಫಲಿತಾಂಶ ಜೂನ್ 4ರಂದು ಬರಲಿದೆ. ಆ ಬಳಿಕ ನೂತನ ಸರ್ಕಾರದ ರಚನೆ ಆಗುತ್ತದೆ. ಚುನಾವಣೆಗಳ ಬಳಿಕವೇ ಟೋಲ್ ದರದಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ದೇಶದ ಬಹುತೇಕ ಟೋಲ್ ರಸ್ತೆಗಳ ದರವನ್ನು ಏಪ್ರಿಲ್ 1 ರಿಂದ ಹೆಚ್ಚಿಸಲಾಗುತ್ತದೆ.

ಎನ್‌ಎಚ್‌ಎಐಗೆ ಸೂಚನೆ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ನೀಡಿದ ಸೂಚನೆಯಲ್ಲಿ ಚುನಾವಣಾ ಆಯೋಗವು ಈ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಬೇಕು ಎಂದು ಹೇಳಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗ ಈ ಸೂಚನೆ ನೀಡಿದೆ. ಹಣದುಬ್ಬರದ ಆಧಾರದ ಮೇಲೆ ಪ್ರತಿ ವರ್ಷ ಟೋಲ್ ದರಗಳಲ್ಲಿ ಈ ಹೆಚ್ಚಳವನ್ನು ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಬಿಲ್ಡರ್ಸ್ ಫೆಡರೇಶನ್ (NHVF) ಪರಿಸ್ಥಿತಿಯನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿ ಎನ್‌ಎಚ್‌ಎಐಗೆ ಪತ್ರ ಬರೆದಿದೆ.
ಈ ಬಾರಿ ಹೆದ್ದಾರಿಯಲ್ಲಿ ಟೋಲ್ ದರಗಳು ಸುಮಾರು 5 ಪ್ರತಿಶತದಷ್ಟು ಹೆಚ್ಚಾಗಲಿವೆ ಎಂದು ಅಂದಾಜಿಸಲಾಗಿತ್ತು. ದೇಶದ 18ನೇ ಲೋಕಸಭೆಗೆ ಏಪ್ರಿಲ್ 19ರಂದು ಚುನಾವಣೆ ಆರಂಭವಾಗಲಿದ್ದು, ಜೂನ್ 1ರವರೆಗೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ದೇಶದಲ್ಲಿ ಲೋಕಸಭೆ ಚುನಾವಣೆಗೆ ಏಪ್ರಿಲ್ 19 ರಿಂದ ಮತದಾನ ಆರಂಭವಾಗಲಿದೆ. ಇದರ ನಂತರ, ಮತದಾನವು ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ 855 ಟೋಲ್ ಪ್ಲಾಜಾಗಳಿವೆ. ಹೊಸ ಟೋಲ್ ದರ ನೀಡದಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಎಷ್ಟಿವೇ ಟೋಲ್ ಸಂಗ್ರಹ ಕೇಂದ್ರ
ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಒಟ್ಟು 81 ಟೋಲ್ ಸಂಗ್ರಹ ಕೇಂದ್ರಗಳಿವೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ 44 ಟೋಲ್ ಪ್ಲಾಜಾಗಳಿದ್ದು, ರಾಷ್ಟ್ರೀಯ ಹೆದ್ದಾರಿ ವಲಯದಲ್ಲಿ 6 ಟೋಲ್ ಪ್ಲಾಜಾಗಳಿವೆ. ಕೆಆರ್‌ಡಿಸಿಎಲ್ ವ್ಯಾಪ್ತಿಯಲ್ಲಿ 31 ಟೋಲ್ ಪ್ಲಾಜಾಗಳಿವೆ.
ವಿದ್ಯುತ್ ದರ ಹೆಚ್ಚಳ ಯಾವಾಗ?
ವಿದ್ಯುತ್ ದರ ಏರಿಕೆ ನಿರ್ಧಾರವನ್ನು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಕೈಗೊಳ್ಳಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ತಮ್ಮ ರಾಜ್ಯದಲ್ಲಿ ಮತದಾನ ಮುಗಿದ ನಂತರವೇ ಹೆಚ್ಚಿದ ಬೆಲೆಗಳನ್ನು ಜಾರಿಗೆ ತರಲು ಅವಕಾಶ ಕಲ್ಪಿಸಲಾಗುವುದು.












Click it and Unblock the Notifications