ಪ್ರಧಾನಿ ಮೋದಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಗಿ: ಮಹಾರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ಕನ್ಫ್ಯೂಷನ್
ಮುಂಬೈ, ಜುಲೈ 31: ಮಹಾರಾಷ್ಟ್ರ ರಾಜಕಾರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆಲ ದಿನಗಳ ಹಿಂದೆ ಅಜಿತ್ ಪವಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಶಿಂಧೆ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಗೊಂಡರು. ಆ ಬಳಿಕ ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಅವರು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದರು. ಈಗ ಶರದ್ ಪವಾರ್ ಅವರು ಪ್ರಧಾನಿ ಮೋದಿಗೆ ಸನ್ಮಾನಿಸುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಇದು ಮತ್ತೊಂದು ತಿರುವಿಗೆ ಕಾರಣವಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡೂ ಬಣಗಳು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳನ್ನು ಸೇರಲಿವೆ ಎಂಬ ವರದಿಗಳ ಹೊರಬಂದಿವೆ. ಇದೇ ಸಂದರ್ಭದಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಪುಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ನರೇಂದ್ರ ಮೋದಿ ಅವರಿಗೆ ನೀಡಲಾಗುವುದು.

ಬಾಲಗಂಗಾಧರ ತಿಲಕ್ ಅವರ ಮೊಮ್ಮಗ ಮತ್ತು ಪ್ರಶಸ್ತಿ ನೀಡುತ್ತಿರುವ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್‌ನ ಉಪಾಧ್ಯಕ್ಷ ರೋಹಿತ್ ತಿಲಕ್ ಅವರು ಕಾರ್ಯಕ್ರಮಕ್ಕೆ ಪವಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ವಿಚಿತ್ರವೆಂದರೆ, ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರ ಡೇಟ್ ಪಡೆಯಲು ಸಹಾಯ ಮಾಡಿದ್ದೇ ಶರದ್ ಪವಾರ್ ಎಂದು ತಿಲಕ್ ಬಹಿರಂಗಪಡಿಸಿದ್ದಾರೆ.
ಮೋದಿ ಅವರ ಸರ್ವೋಚ್ಚ ನಾಯಕತ್ವ ಮತ್ತು ನಾಗರಿಕರಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿದ್ದನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು 'ಇಂಡಿಯಾ' ಮೈತ್ರಿಕೂಟವನ್ನು ರಚಿಸಲಾಗಿದೆ. ಈ ಮೈತ್ರಿಕೂಟದಲ್ಲಿ ಪವಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಅವರು ಸ್ವತಃ ಮೋದಿಯನ್ನು ಹೊಗಳುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇದು ವಿರೋಧ ಪಕ್ಷದ ನಾಯಕರನ್ನು ಕೆರಳಿಸಿದೆ.
ಪವಾರ್ ಅವರ ರಾಜಕೀಯವನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ನಿಜವಾಗಿಯೂ ವಿಫಲರಾಗಿದ್ದೇವೆ. ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ನಿರ್ಧಾರವನ್ನು ಅವರು ಕೈಬಿಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ಹೇಳಿದ್ದಾರೆ.

ಮಣಿಪುರದ ವಿಚಾರವಾಗಿ ಪ್ರಧಾನಿ ಮೋದಿ ಮೌನವಾಗಿದ್ದಾರೆಂದು ಆರೋಪಿಸಿ ಪುಣೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕೆ ಎನ್‌ಸಿಪಿ ಸಹ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ. ಇದು ಮತ್ತೊಂದು ಗೊಂದಲಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಅಜಿತ್ ಪವಾರ್ ಅವರು ತಮ್ಮ ಬೆಂಬಲಿಗ ನಾಯಕರನ್ನು ಕರೆದುಕೊಂಡು ಮಹಾರಾಷ್ಟ್ರ ಸರ್ಕಾರವನ್ನು ಸೇರಿಕೊಂಡರು. ಅವರು ಉಪ ಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸಿದ್ದಾರೆ. ಹಣಕಾಸು ಸಚಿವರಾಗಿಯೂ ಅವರ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಮುಖ್ಯಮಂತ್ರಿ ಆಗಬೇಕೆಂಬ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲೀಗ ಶಿವಸೇನಾ ( ಶಿಂಧೆ ಬಣ ) -ಬಿಜೆಪಿ- ಎನ್‌ಸಿಪಿ ( ಅಜಿತ್ ಪವಾರ್ ಬಣ ) ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದೆ.












Click it and Unblock the Notifications