ನೂತನ ಸಂಸತ್ತಿನ ಉದ್ಘಾಟನೆಯಲ್ಲಿ ಭಾಗಿಯಾಗಲಿದೆ ನವೀನ್ ಪಟ್ನಾಯಕ್ ಪಕ್ಷ ಬಿಜು ಜನತಾ ದಳ
ನವದೆಹಲಿ, ಮೇ. 24: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳವು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದೆ ಎಂದು ಹೇಳಿದೆ. ಎನ್‌ಡಿಎಯೇತರ ಪಕ್ಷಗಳಲ್ಲಿ ಮೊದಲ ಬಾರಿಗೆ ಬಿಜು ಜನತಾ ದಳವು ಸಕಾರಾತ್ಮಕ ಪ್ರತಿಕ್ರಿಯೆ ಕಳುಹಿಸಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಸಾಮೂಹಿಕವಾಗಿ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಪ್ರತಿಪಕ್ಷಗಳ ಬಹಿಷ್ಕಾರ ಯೋಜನೆಯನ್ನು ಪಕ್ಕಕ್ಕೆ ತಳ್ಳಿದ ಬಿಜೆಡಿ, ರಾಷ್ಟ್ರಪತಿ ಮತ್ತು ಸಂಸತ್ತಿಗೆ "ಪಾವಿತ್ರ್ಯತೆ" ಇದೆ, ಇಂತಹ ಸಮಸ್ಯೆಗಳನ್ನು ನಂತರ ಚರ್ಚಿಸಬಹುದು ಎಂದು ಹೇಳಿದೆ.

"ಭಾರತದ ರಾಷ್ಟ್ರಪತಿಗಳು ಭಾರತ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. ದೇಶದ ಸಂಸತ್ತು ಭಾರತದ 1.4 ಶತಕೋಟಿ ಜನರನ್ನು ಪ್ರತಿನಿಧಿಸುತ್ತದೆ. ಎರಡೂ ಸಂಸ್ಥೆಗಳು ಭಾರತೀಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆ ಮತ್ತು ಭಾರತದ ಸಂವಿಧಾನದಿಂದ ತಮ್ಮ ಅಧಿಕಾರವನ್ನು ಪಡೆದುಕೊಳ್ಳುತ್ತವೆ" ಎಂದು ಬಿಜು ಜನತಾ ದಳ ಪಕ್ಷದ ಹೇಳಿಕೆ ತಿಳಿಸಿದೆ.
"ಈ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಪಾವಿತ್ರ್ಯತೆ ಮತ್ತು ಗೌರವದ ಮೇಲೆ ಪರಿಣಾಮ ಬೀರುವ ಯಾವುದೇ ವಿಷಯಕ್ಕಿಂತ ಮೇಲಿರಬೇಕು ಎಂದು ಬಿಜು ಜನತಾ ದಳ ನಂಬುತ್ತದೆ. ಅಂತಹ ವಿಷಯಗಳು ಯಾವಾಗಲೂ ಸಂಸತ್ತಿನಲ್ಲಿ ಚರ್ಚೆಯಾಗಬಹುದು. ಆದ್ದರಿಂದ ಬಿಜೆಡಿ ಈ ಮಹತ್ವದ ಸಂದರ್ಭದಲ್ಲಿ ಭಾಗಿಯಾಗಿರುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಬುಧವಾರ ಮುಂಜಾನೆ, 20 ವಿರೋಧ ಪಕ್ಷಗಳು ಭಾನುವಾರದ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿದವು. ನೂತನ ಸಂಸತ್ತಿನ ಕಟ್ಟಡವನ್ನು ಪ್ರಧಾನಿ ಉದ್ಘಾಟಿಸುವ ಯೋಜನೆಯು "ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ" ಎಂದು ಕರೆದಿದೆ.
"ಈ ಅಮಾನವೀಯ ಕೃತ್ಯವು ರಾಷ್ಟ್ರಪತಿಗಳ ಉನ್ನತ ಹುದ್ದೆಯನ್ನು ಅವಮಾನಿಸುತ್ತದೆ ಮತ್ತು ಸಂವಿಧಾನದ ಅಕ್ಷರ ಮತ್ತು ಆತ್ಮವನ್ನು ಉಲ್ಲಂಘಿಸುತ್ತದೆ. ಎರಡು ಸದನಗಳ ಸಭಾಪತಿಗಳಿಗೆ, ಸದಸ್ಯರಿಗೆ ಆಮಂತ್ರಣ ನೀಡಲಾಗಿದೆ. ಆದರೆ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಮಂತ್ರಣ ನೀಡಿಲ್ಲ ಎಂದಿರುವ ಆಮ್ ಆದ್ಮಿ ಪಕ್ಷವು ಕಾರ್ಯಕ್ರಮ ಬಹಿಷ್ಕರಿಸುವುದಾಗಿ ತಿಳಿಸಿದೆ.
ಒಡಿಶಾದ ಐದು ಬಾರಿ ಮುಖ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್ ಅವರು ಯಾವಾಗಲೂ ತಮ್ಮ ಪಕ್ಷವನ್ನು ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಸಮಾನವಾಗಿ ಇರಿಸಿಕೊಂಡಿದ್ದಾರೆ. ಆದರೆ ಅವರು ಆಗಾಗ್ಗೆ ಬಿಜೆಪಿಗೆ ಬೆಂಬಲವನ್ನು ನೀಡುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ಬಿಜೆಡಿ ಮುಖ್ಯಸ್ಥರು ತಮ್ಮ ಪಕ್ಷವು ಯಾವುದೇ ವಿರೋಧ ಪಕ್ಷದ ಭಾಗವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಡಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದಿದ್ದಾರೆ.
ಬಿಜೆಪಿ ಪ್ರತಿಪಕ್ಷಗಳ ಬಹಿಷ್ಕಾರವನ್ನು ತಳ್ಳಿಹಾಕಿದೆ. ನಾವು ಎಲ್ಲರನ್ನೂ ಆಹ್ವಾನಿಸಿದ್ದೇವೆ. ಅವರು ತಮ್ಮ ಬುದ್ಧಿವಂತಿಕೆಗೆ ಅನುಗುಣವಾಗಿ ನಿರ್ಧರಿಸಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸದೆ ಹೇಳಿದ್ದಾರೆ. ವಿರೋಧ ಪಕ್ಷಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.












Click it and Unblock the Notifications