ಶರದ್ ಪವಾರ್ & ರಾಹುಲ್ ಗಾಂಧಿ ಮಹತ್ವದ ಭೇಟಿ!
ನವದೆಹಲಿ, ಏಪ್ರಿಲ್. 13: ದೇಶದ ರಾಜಕೀಯದಲ್ಲಿ ಬದಲಾವಣೆ ತರಲು ಪಣತೊಟ್ಟಿರುವ ವಿಪಕ್ಷ ನಾಯಕರು ಲೋಕಸಭೆ ಚುನಾವಣೆಗೆ ಮುನ್ನ ಧ್ರುವೀಕರಣಕ್ಕೆ ಮುಂದಾಗಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಇಂದು ಸಂಜೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ವಿಪಕ್ಷಗಳ ಅಧಿಕಾರದ ಕನಸು ಚಿಗುರಿದಂತಾಗಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮಧ್ಯೆ ನಡೆದಿರುವ ಚರ್ಚೆಯಲ್ಲಿ ಕೇಂದ್ರದಲ್ಲಿ ವಿರೋಧ ಪಕ್ಷಗಳ ಒಗ್ಗಟಿನ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.
ಸಂಸತ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯಲಾಗುತ್ತಿದೆ. ಹೀಗಾಗಿ ಸಮಾನ ಮನಸ್ಕ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು ಎಂಬ ವಿಷಯ ಮೊದಲಿನಿಂದಲೂ ಚರ್ಚೆಯಲ್ಲಿತ್ತು. ಈಗಲೂ ಅದೇ ವಿಚಾರ ಚರ್ಚೆಯಾಗಿದೆ. ಇತ್ತೀಚೆಗೆ ತಮ್ಮ ಆತ್ಮಚರಿತ್ರೆ ಮೂಲಕ ಸುದ್ದಿಯಾಗಿದ್ದ ಶರದ್ ಪವಾರ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ನಿತೀಶ್, ತೇಜಸ್ವಿ & ರಾಹುಲ್ ಭೇಟಿ
ಶರದ್ ಪವಾರ್ ಭೇಟಿಗೆ ಮೊದಲು ರಾಹುಲ್ ಗಾಂಧಿ ಜೊತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಚರ್ಚೆ ನಡೆಸಿದ್ದರು. ನಿತೀಶ್ ಕುಮಾರ್ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಒಟ್ಟಾಗಿ ರಾಹುಲ್ ಜೊತೆ ಮಾತುಕತೆ ನಡೆಸಿದ್ದರು.
ಈ ಚರ್ಚೆ ನಡೆದು ಒಂದೆರಡು ದಿನ ಕಳೆಯುವ ಒಳಗೆ ಶರದ್ ಪವಾರ್ ಕೂಡ ರಾಹುಲ್ ಗಾಂಧಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. 2024ರ ಲೋಕಸಭೆ ಚುನಾವಣೆಗೆ ಮೊದಲು ವಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸಲು ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವುದು ಗಮನಾರ್ಹ.
ಅದಾನಿ ವಿಚಾರದಲ್ಲಿ ಪವಾರ್ ಸದ್ದು
ಅಂದಹಾಗೆ ಅದಾನಿ ಸಮೂಹ ಸಂಸ್ಥೆಗಳ ವಿಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಜತೆ ಭಿನ್ನ ನಿಲುವು ಹೊಂದಿರುವ ಶರದ್ ಪವಾರ್, ತಮ್ಮ ಆತ್ಮಚರಿತ್ರೆಯಲ್ಲಿ ಗೌತಮ್ ಅದಾನಿಯನ್ನು ಹಾಡಿ ಹೊಗಳಿದ್ದರು. ಈ ವಿಚಾರ ಕಾಂಗ್ರೆಸ್ ನಾಯಕರಿಗೆ ಭಾರಿ ಮುಜುಗರ ತರಿಸಿತ್ತು.
ಮರಾಠಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಶರದ್ ಪವಾರ್ ಆತ್ಮಚರಿತ್ರೆ 'ಲೋಕ್ ಮಜೆ ಸಂಗತಿ'ಯಲ್ಲಿ ಗೌತಮ್ ಅದಾನಿ ಒಬ್ಬ ಕಠಿಣ ಪರಿಶ್ರಮಿ, ಸರಳ ಹಾಗೂ ಸಹಜ ವ್ಯಕ್ತಿ ಎಂದು ಬಣ್ಣಿಸಿದ್ದರು ಶರದ್ ಪವಾರ್.
ಪವಾರ್ ಮಾತು ಕೇಳಿದ್ದರಾ ಅದಾನಿ?
ವಜ್ರದ ಉದ್ಯಮದಲ್ಲಿಅದಾನಿ ಉತ್ತಮ ಸಂಪಾದನೆ ಮಾಡುತ್ತಿದ್ದರು. ಆದರೆ, ಮೂಲಸೌಕರ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹದಾಸೆ ಹೊಂದಿದ್ದರು. ಮುಂದ್ರಾದಲ್ಲಿ ಬಂದರು ಅಭಿವೃದ್ಧಿಪಡಿಸಲು ಅದಾನಿ ಶ್ರಮಪಟ್ಟರು.
ನಂತರ ಕಲ್ಲಿದ್ದಲು ಕ್ಷೇತ್ರಕ್ಕೆ ಕಾಲಿಟ್ಟ ಗೌತಮ್ ಅದಾನಿ ಅವರು, ನನ್ನ ಸಲಹೆಯ ಮೇರೆಗೆ ಶಾಖೋತ್ಪನ್ನ ವಲಯ ಪ್ರವೇಶ ಮಾಡಿದರು. ಭಂಡಾರಾದಲ್ಲಿ 3,000 ಮೆಗಾವಾಟ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಮೂಲಕ ನನ್ನ ಸಲಹೆಯನ್ನು ಪಾಲಿಸಿದರು ಎಂದು ಎನ್‌ಸಿಪಿ ಮುಖ್ಯಸ್ಥ ಪವಾರ್ ಬರೆದುಕೊಂಡಿದ್ದರು.
ಇನ್ನು ಈ ವಿಚಾರ ಎಲ್ಲೆಡೆ ಚರ್ಚೆಯಾಗಿ, ವಿಪಕ್ಷ ನಾಯಕರಿಗೆ ಬೇಸರ ತರಿಸಿದ ಕೆಲವೇ ದಿನದಲ್ಲಿ ಶರದ್ ಪವಾರ್ ಹಾಗೂ ರಾಹುಲ್ ಗಾಂಧಿ ಭೇಟಿ ಕುತೂಹಲ ಕೆರಳಿಸಿದೆ. 2024ರ ಚುನಾವಣೆಗಾಗಿ ವಿಪಕ್ಷಗಳು ಭರದ ಸಿದ್ಧತೆ ನಡೆಸಿದ್ದು, ಚುನಾವಣೆಗೆ ಇನ್ನೂ 1 ವರ್ಷ ಬಾಕಿ ಇರುವಾಗಲೇ ಗೆಲುವಿಗಾಗಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಇದೆಲ್ಲಾ ಯಾವ ರೀತಿ ವರ್ಕೌಟ್ ಆಗುತ್ತೆ ಎಂಬುದನ್ನ ಕಾದು ನೋಡಬೇಕು.












Click it and Unblock the Notifications