NASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರ
ತಿರುವನಂತಪುರಂ, ಆಗಸ್ಟ್ 28: ಕೇರಳ ಪ್ರವಾಹದ ರೌದ್ರಾವತಾರವನ್ನು ತೋರಿಸುವ ಚಿತ್ರವೊಂದನ್ನು ನಾಸಾ(National Aeronautics and Space Administration) ಬಿಡುಗಡೆ ಮಾಡಿದೆ. ಪ್ರವಾಹಕ್ಕೂ ಮುನ್ನ ಮತ್ತು ಪ್ರವಾಹದ ನಂತರ ಕೇರಳ ಹೇಗಿತ್ತು ಎಂಬುದನ್ನು ಈ ಚಿತ್ರ ಸ್ಪಷ್ಟವಾಗಿ ತೋರಿಸಿದೆ.
ಕಣ್ಣಿಗೆ ತಂಪು ನೀಡುವ ಮಳೆ, ಎಲ್ಲೆಲ್ಲೂ ಹಸಿರು... ದೇವರನಾಡು ಎಂಬ ಉಪಮೇಯ ಗಳಿಸಿದ ಕೇರಳದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ವಾತಾವರಣ! ಜೂನ್ ನಿಂದ ಆಗಸ್ಟ್ ಮೊದಲವಾರದವರೆಗೆ ಕೇರಳ ಕಂಗೊಳಿಸುತ್ತಿದ್ದುದೇ ಹೀಗೆ.
ಆದರೆ ಅದೇನಾಯ್ತೋ, ಆಗಸ್ಟ್ 8 ರಿಂದ ಧಾರಾಕಾರವಾಗಿ ಸುರಿಯತೊಡಗಿದ ಮಳೆ ನಿಲ್ಲುವ ಸೂಚನೆಯೇ ಕಾಣಲಿಲ್ಲ. ಮೋಡ ಕತ್ತರಿಸಿದಂತೆ ಸುರಿದ ಮಳೆ, ಹಸಿರು ತೋಟ, ಬೆಟ್ಟ-ಗುಡ್ಡ, ಮನೆಗಳನ್ನೆಲ್ಲ ಕೊಚ್ಚಿಕೊಂಡು ಹೋಗುವಂಥ ಪ್ರವಾಹಕ್ಕೆ ಜನತೆ ತತ್ತರಿಸಿಹೋಗಿತ್ತು.
ಉಪಗ್ರಹದ ಕಣ್ಣಲ್ಲಿ ದೇವರನಾಡು ಕೇರಳ ಪ್ರವಾಹಕ್ಕೂ ಮುನ್ನ ಮತ್ತು ಪ್ರವಾಹದ ನಂತರ ಹೇಗೆ ಕಾಣುತ್ತಿತ್ತು ಎಂಬುದು ನಾಸಾದ ಚಿತ್ರದಿಂದ ತಿಳಿದುಬಂದಿದೆ.
ಫೆಬ್ರವರಿ 6, 2018 ರಂದು ಕೇರಳವು ಉಪಗ್ರಹದ ಕಣ್ಣಲ್ಲಿ ಹೇಗೆ ಕಂಡಿತ್ತು ಮತ್ತು ಆಗಸ್ಟ್ 22, 2018 ರಂದು ಹೇಗೆ ಕಂಡಿತ್ತು ಎಂಬ ಚಿತ್ರವನ್ನು ನೋಡಿದರೆ ಕೇರಳ ಪ್ರವಾಹದ ರೌದ್ರತೆ ಅರ್ಥವಾಗುತ್ತದೆ.
ಇತ್ತೀಚೆಗಷ್ಟೆ ನಾಸಾ, ಕೇರಳ ಪ್ರವಾಹವು ಉಪಗ್ರಹದ ಕಣ್ಣಲ್ಲಿ ಹೇಗೆ ಕಾಣುತ್ತದೆ ಎಂಬ ವಿಡಿಯೋವನ್ನು ಸಹ ಬಿಡುಗಡೆ ಮಾಡಿತ್ತು.

ಪ್ರವಾಹಕ್ಕೂ ಮುನ್ನ ಹೀಗಿತ್ತು ಕೇರಳ!
ದೇವರ ನಾಡು ಎಂಬ ಹೆಗ್ಗಳಿಕೆ ಪಡೆದ ಕೇರಳ ಪ್ರವಾಹಕ್ಕೂ ಮುನ್ನ ಹೇಗಿತ್ತು! ಆಗಸ್ಟೇ ಚಳಲಿಗಾಲ ಮುಗಿಯುತ್ತಿರುವ ಸಮಯದಲ್ಲಿ ಹಸಿರ ಹೊದ್ದ ಕೇರಳ ಉಪಗ್ರಹದ ಕಣ್ಣಲ್ಲಿ ಸುರಸುಂದರ ನಾಡಾಗಿ ಕಾಣುತ್ತಿತ್ತು. ಫೆಬ್ರವರಿ 6, 2018 ರಂದು ತೆಗೆದ ಚಿತ್ರ ಇದು.

ಪ್ರವಾಹದ ನಂತರ ಹೀಗಾಯ್ತು ಕೇರಳ!
ನಂತರ ಆಗಸ್ಟ್ 22, 2018 ರಂದು ನಾಸಾದ ಉಪಗ್ರಹ ತೆಗೆದ ಚಿತ್ರ ಕೇರಳದ ಪ್ರವಾಹದ ರೌದ್ರತೆಗೆ ಸಾಕ್ಷಿಯಾಗುತ್ತದೆ. ಆಗಸ್ಟ್ 8 ರಿಂದ ಆರಂಭವಾದ ಧಾರಾಕಾರ ಮಳೆಗೆ ತತ್ತರಿಸಿದ ಕೇರಳದಲ್ಲಿ ಪ್ರವಾಹ ತಲೆದೋರಿತ್ತು. ಪ್ರವಾಹದಿಂದ ತತ್ತರಿಸಿದ ಸ್ಥಳಗಳು ಉಪಗ್ರಹದ ಕಣ್ಣಲ್ಲಿ ಹೇಗೆ ಕಾಣುತ್ತಿವೆ ನೋಡಿ!
|
ವಿಡಿಯೋ ಬಿಡುಗಡೆ ಮಾಡಿತ್ತು ನಾಸಾ
ಕೇರಳದಲ್ಲಿ ಒಂದು ವಾರ ಸುರಿದ ಧಾರಾಕಾರ ಮಳೆಯ ಡೇಟಾವನ್ನು ದಾಖಲಿಸಿದ್ದ ನಾಸಾ, ವಿಡಿಯೋವೊಂದನ್ನು ಸಹ ಬಿಡುಗಡೆ ಮಾಡಿತ್ತು. ಪ್ರವಾಹಕ್ಕೆ ತುತ್ತಾದ ಕೇರಳ ಈ ವಿಡಿಯೋದಲ್ಲಿ ಹಳದಿ, ಕೆಂಪು ಬಣ್ಣದಲ್ಲಿ ಕಾಣಿಸುತ್ತಿದೆ. ಒಂದೇ ವಾರದಲ್ಲಿ ಕೇರಳದಲ್ಲಿ ಸುಮಾರು 18.5 ಇಂಚು ಮಳೆಯಾಗಿತ್ತು ಎಂಬುದನ್ನು ನಾಸಾ ಟ್ರ್ಯಾಕ್ ಮಾಡಿತ್ತು.

ಕೊನೆಗೂ ನಿಂತಿತು ಮಳೆಯ ಆರ್ಭಟ
ಸುಮಾರು ಎರಡು ವಾರಗಳ ಕಾಲ ಎಡಬಿಡದೆ ಸುರಿದ ಮಳೆ ಕೊನೆಗೂ ನಿಂತಿದೆ. ಆದರೆ ಅದು ಉಂಟುಮಾಡಿದ ಹಾನಿ ಮಾತ್ರ ಹೇಳತೀರದು. ಕೇರಳದ ಡ್ಯಾಮ್ ಗಳಿಂದ ಏಕಕಾಲದಲ್ಲಿ ನೀರನ್ನು ಹೊರಬಿಟ್ಟಿದ್ದು ಸಹ ಪ್ರವಾಹಕ್ಕೆ ಬಹುಮುಖ್ಯ ಕಾರಣವಾಗಿತ್ತು. ಈ ದುರಂತದಲ್ಲಿ ಇದುವರೆಗೂ ಸುಮಾರು 350 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಕೇರಳದಲ್ಲಿ ಈ ಶತಮಾನದಲ್ಲಿ ಸಂಭವಿಸಿದ ಭೀಕರ ದುರಂತ ಇದು ಎನ್ನಲಾಗಿದೆ.












Click it and Unblock the Notifications