ನಿರಾಶ್ರಿತರ ಶಿಬಿರದಲ್ಲಿ ಯುವತಿ ಮೇಲೆ ಬಲಾತ್ಕಾರ
ಮುಜಾಫರ್ನಗರ, ನ.4: ಎಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಕಾಣುತ್ತಿದ್ದರೆ ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ಮಾತ್ರ ಕರಾಳ ಮೌನ ಆವರಿಸಿದೆ. ಕೋಮುಘರ್ಷಣೆಯ ಹೊಗೆ ದೀಪಗಳ ಬೆಳಕು ಮಂಕಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ನಿರಾಶ್ರಿತರ ತಾಣದಲ್ಲಿದ್ದ ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಮುಜಾಫರ್ನಗರದಲ್ಲಿನ ಕೋಮುಗಲಭೆಗೆ ತುತ್ತಾಗಿ ಸುಮಾರು 45,000 ಮಂದಿ ಮನೆ ಕಳೆದುಕೊಂಡಿದ್ದಾರೆ. ಸುಮಾರು 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹೀಗೆ ಆಶ್ರಯ ಇಲ್ಲದೆ ನಿರಾಶ್ರಿತರ ಕ್ಯಾಂಪಿನಲ್ಲಿದ್ದ 20 ವರ್ಷದ ಯುವತಿ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿದ ದುರ್ಘಟನೆ ನಡೆದಿದೆ.
ಫುಗುನಾ ಪ್ರದೇಶದ ಜೋಗಿ ಘೇರಿ ಗ್ರಾಮದಲ್ಲಿ ಯುವತಿ ಮೇಲೆ ಇಬ್ಬರು ಯುವಕರು ಮುಗಿ ಬಿದ್ದಿದ್ದಾರೆ.ಅತ್ಯಾಚಾರದ ಬಗ್ಗೆ ಯಾರೊಂದಿಗಾದರೂ ಬಾಯ್ಬಿಟ್ಟರೆ ಕತ್ತು ಸೀಳುವುದಾಗಿ ಚಾಕು ತೋರಿಸಿ ಬೆದರಿಸಿದ್ದಾರೆ. ನಂತರ ಆ ಯುವತಿ ತನ್ನ ಕ್ಯಾಂಪಿನಲ್ಲಿದ್ದ ಇತರೆ ನಿರಾಶ್ರಿತರ ಬಳಿ ದುಃಖ ತೋಡಿಕೊಂಡಿದ್ದಾಳೆ.

ಇಬ್ಬರು ಯುವಕರನ್ನು ಹುಡುಕಿ ಎಳೆ ತಂದು ಹಿಗ್ಗಾ ಮುಗ್ಗಾ ಚೆಚ್ಚಲಾಗಿದೆ. ನಂತರ ಆರೋಪಿಗಳನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಆಕೆ ಮೇಲೆ ಅತ್ಯಾಚಾರ ಎಸಗಿರುವುದು ಖಾತ್ರಿಯಾಗಿದೆ. ಯುವತಿಯ ಪೋಷಕರು ದೂರು ನೀಡಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷ ಜಾಟ್ ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಒಂದಾಗಿ ಸೇರಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾ, ಸಿಹಿತಿಂಡಿ ಹಂಚುತ್ತಾ ಬೆಳಕಿನ ಹಬ್ಬದ ಖುಷಿ ಅನುಭವಿಸಿದ್ದರು. ಆದರೆ ಈ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ಕೋಮುಘರ್ಷಣೆಯು 50 ಮಂದಿಯನ್ನು ಬಲಿತೆಗೆದುಕೊಂಡ ಬಳಿಕ ಎರಡೂ ಸಮುದಾಯಗಳು ಪರಸ್ಪರ ಮುಖ ನೋಡುತ್ತಿಲ್ಲ.
ಅಲ್ಲಿನ ಖಾಪ್ ನಾಯಕರು ಸಾರ್ವಜನಿಕ ಸಭೆ ಕರೆದು, ಈ ವರ್ಷ 'ಕರಾಳ ದೀಪಾವಳಿ'ಗೆ ಕರೆ ನೀಡಿದ್ದಾರೆ. ಹೀಗಾಗಿ ಅಲ್ಲಿನ ಮನೆಗಳಲ್ಲಿ ಹಬ್ಬದ ಸಂಭ್ರಮವೇ ಇಲ್ಲ.












Click it and Unblock the Notifications