25 ವರ್ಷಗಳ ಕಾಲ ಒಟ್ಟಿಗೆ ವಾಸಿಸಿ ಲಿವ್-ಇನ್ ಸಂಗಾತಿ ಮೇಲೆ ಆಸಿಡ್ ಎರಚಿದ!
ಮುಂಬೈ ಜನವರಿ 14: ಶ್ರದ್ದಾ ವಾಕರ್ ಪ್ರಕರಣದ ಬಳಿಕವೂ ಲಿವ್-ಇನ್ ಸಂಗಾತಿಯ ಮೇಲೆ ದಾಳಿ, ಕೊಲೆ, ಹಲ್ಲೆಯಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮುಂಬೈನ ಗಿರ್‌ಗಾಂವ್ ಪ್ರದೇಶದಲ್ಲಿ ಶುಕ್ರವಾರ ತನ್ನ ಲಿವ್-ಇನ್ ಪಾರ್ಟ್ನರ್ ಮೇಲೆ ಆಸಿಡ್ ಎಸೆದ ಆರೋಪದ ಮೇಲೆ 62 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಗಿರ್ಗಾಂವ್‌ನ ಫನಾಸ್ ವಾಡಿ ಪ್ರದೇಶದ ನಿವಾಸಿ ಸಂತ್ರಸ್ತೆಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯಾದ ಮಹೇಶ್ ಪೂಜಾರಿ ಮತ್ತು ಮಹಿಳೆ ಕಳೆದ 25 ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಜಗಳಗಳಾಗುತ್ತಿದ್ದವು. ಪದೇ ಪದೇ ಜಗಳ ನಡೆಯುತ್ತಿದ್ದರಿಂದ ಮಹಿಳೆ ಆರೋಪಿಯನ್ನು ತನ್ನ ಮನೆಯಿಂದ ಹೊರಹೋಗುವಂತೆ ಒತ್ತಡ ಹೇರಿದ್ದಾಳೆ ಎನ್ನಲಾಗಿದೆ.
ಎರಡು ದಿನಗಳಿಂದ ಮನೆಯಿಂದ ಹೊರಗಿದ್ದ ಮಹೇಶ್ ಶುಕ್ರವಾರ ಮುಂಜಾನೆ 5.30ಕ್ಕೆ ನೀರು ತರಲು ಹೋಗಿದ್ದ ವೇಳೆ ಮನೆಗೆ ಬಂದು ಆಸಿಡ್ ಎರಚಿದ್ದಾನೆ. ಮಹೇಶ್ ಪ್ಲಾಸ್ಟಿಕ್ ಬಾಟಲಿಯಲ್ಲಿ ಆಸಿಡ್ ತಂದಿದ್ದ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಮುಂಬೈನ ಎಲ್ ಟಿ ಮಾರ್ಗ್ ಪೊಲೀಸರು ಬಂಧಿಸಿದ್ದಾರೆ.

ಶ್ರದ್ಧಾ ವಾಕರ್ ಪ್ರಕರಣ
ಅಫ್ತಾಬ್ ಅವರು ಮೇ 18 ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಕ್ರೂರ ಕೃತ್ಯವೆಸಗಿದ್ದನು. ಬಳಿಕ ಆಕೆಯ ದೇವನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300-ಲೀಟರ್ ಫ್ರಿಡ್ಜ್‌ನಲ್ಲಿ ಇರಿಸಿದ್ದನು. ಹಲವಾರು ದಿನಗಳವರೆಗೆ ಅರಣ್ಯ ಸೇರಿದಂತೆ ನಗರದಾದ್ಯಂತ ಎಸೆದಿದ್ದನು.
ಕಳೆದ ವರ್ಷ ಮೇನಲ್ಲಿ ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್‌ನನ್ನು ಕೊಲೆ ಮಾಡಿದ್ದ ಆಫ್ತಾಬ್ ಪೂನಾವಾಲಾ ದೇಹವನ್ನು ತುಂಡಾಗಿಸಲು ಆತ ಗರಗಸವನ್ನು ಬಳಸಿದ್ದಾನೆ ಎಂದು ಆಕೆಯ ಮೂಳೆಗಳ ಶವಪರೀಕ್ಷೆಯಿಂದ ತಿಳಿದುಬಂದಿದೆ. ಮಂಗಳವಾರ ಏಮ್ಸ್‌ನಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಿಂದ ಇದು ತಿಳಿದು ಬಂದಿದೆ.
ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳ ಪ್ರಕಾರ ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಿಂದ ಪಡೆಯಲಾದ ಛಿದ್ರಗೊಂಡ ಮೂಳೆಗಳೊಂದಿಗೆ ಶ್ರದ್ಧಾ ವಾಕರ್ ಅವರ ತಂದೆಯ ಡಿಎನ್‌ಎ ಹೊಂದಿಕೆಯಾಗಿದೆ. ಅಫ್ತಾಬ್‌ನ ಪಾಲಿಗ್ರಾಫ್ ಮತ್ತು ನಾರ್ಕೋ ಪರೀಕ್ಷೆಯ ವಿವರವಾದ ವರದಿಯನ್ನು ದೆಹಲಿ ಪೊಲೀಸರು ಸ್ವೀಕರಿಸಿದ್ದರು. ವಾಕರ್ ಅವರ ದೇಹದ ಭಾಗಗಳನ್ನು ಹುಡುಕುತ್ತಿರುವಾಗ ಪೊಲೀಸರು ಆರಂಭದಲ್ಲಿ 13 ಮೂಳೆ ತುಣುಕುಗಳನ್ನು ಪ್ರದೇಶದಿಂದ ವಶಪಡಿಸಿಕೊಂಡರು.
ನವೆಂಬರ್ 12 ರಂದು ಪೂನಾವಾಲಾ ಅವರನ್ನು ಬಂಧಿಸಲಾಯಿತು ಮತ್ತು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ಬಂಧನವನ್ನು ನವೆಂಬರ್ 17 ರಂದು ಐದು ದಿನಗಳವರೆಗೆ ವಿಸ್ತರಿಸಲಾಯಿತು.












Click it and Unblock the Notifications