Ambani House: 15,000 ಕೋಟಿ ರೂಪಾಯಿ ವೆಚ್ಚದ ಮನೆ ಖಾಲಿ ಮಾಡ್ತಾರಾ ಅಂಬಾನಿ?
ಜಗತ್ತಿನ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿರುವ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಒಡೆತನದ ಆಂಟಿಲಿಯಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಐಷಾರಾಮಿ ವಿನ್ಯಾಸ, ದುಬಾರಿ ವೆಚ್ಚ, ಲಕ್ಷ ಲಕ್ಷ ವಿದ್ಯುತ್ ಬಿಲ್, ಇಂಜಿನಿಯರಿಂಗ್ ಅದ್ಭುತಕ್ಕಾಗಿ ಸಾಕಷ್ಟು ಸುದ್ದಿ ಮಾಡಿದ್ದ ಆಂಟಿಲಿಯಾ ಇದೀಗ ವಿವಾದದಿಂದಾಗಿ ಸುದ್ದಿಯಾಗುತ್ತಿದೆ.
15000 ಕೋಟಿ ರೂಪಾಯಿ ಮೌಲ್ಯದ ಆಂಟಿಲಿಯಾವನ್ನು ವಿವಾದಿತ ಜಾಗದಲ್ಲಿ ಕಟ್ಟಲಾಗಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು, ನಂತರ ಭಾರತದ ರಾಷ್ಟ್ರಪತಿಗಳು ಅನುಮೋದನೆ ನೀಡಿದರು. ಆದರೆ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಆಂಟಿಲಿಯಾವನ್ನು ವಕ್ಫ್ ಮಂಡಳಿಯ ಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಮುಂಬೈನ ಪೆರೇಡ್ ರಸ್ತೆ ಪ್ರದೇಶದಲ್ಲಿರುವ ಭಾರತದ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾದ ಆಂಟಿಲಿಯಾವನ್ನು ವಕ್ಫ್ ಮಂಡಳಿಯ ಭೂಮಿಯಲ್ಲಿ ನಿರ್ಮಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಟಿವಿ9 ಹಿಂದಿ ಈ ಬಗ್ಗೆ ವರದಿ ಮಾಡಿದ್ದು, ಮುಖೇಶ್ ಅಂಬಾನಿ 2002 ರಲ್ಲಿ ವಕ್ಫ್ ಮಂಡಳಿಯಿಂದ ಸುಮಾರು 21 ಕೋಟಿ ರೂಪಾಯಿಗಳಿಗೆ ನಾಲ್ಕೂವರೆ ಲಕ್ಷ ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಖರೀದಿಸಿದ್ದರು ಎಂದು ಮಾಹಿತಿ ನೀಡಿದೆ.
ನ್ಯಾಯಾಲಯದಲ್ಲಿ ಪ್ರಕರಣ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಡಿಸಲಾದ ಕ್ರಮ ತೆಗೆದುಕೊಂಡ ವರದಿ (ಎಟಿಆರ್) ಪ್ರಕಾರ, ವಕ್ಫ್ ಮಂಡಳಿಯ ಆಸ್ತಿಯನ್ನು ಖಾಸಗಿ ಬಳಕೆಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ವಕ್ಫ್ ಮಂಡಳಿ ಹೇಳಿದ್ದರಿಂದ ಭೂ ಒಪ್ಪಂದ ವಿವಾದಕ್ಕೆ ಒಳಗಾಗಿದೆ. ಭೂಮಿಯ ಹಿಂದಿನ ಮಾಲೀಕ ಕರೀಮ್ ಭಾಯ್ ಇಬ್ರಾಹಿಂ ಧಾರ್ಮಿಕ ಶಿಕ್ಷಣ ಮತ್ತು ಅನಾಥಾಶ್ರಮ ನಿರ್ಮಾಣಕ್ಕಾಗಿ ವಕ್ಫ್ ಮಂಡಳಿಗೆ ಭೂಮಿಯನ್ನು ನೀಡಿದ್ದರು, ಆದರೆ ಇಲ್ಲಿ ಆ ಭೂಮಿಯನ್ನು ಬಿಲಿಯನೇರ್ ಮುಖೇಶ್ ಅಂಬಾನಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.
ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಹಲವು ವರ್ಷಗಳಿಂದ ಬಾಕಿಯಿದ್ದು, ಒಂದು ವೇಳೆ ನ್ಯಾಯಾಲಯದಲ್ಲಿ ಅಂಬಾನಿ ವಿರುದ್ಧ ತೀರ್ಪು ಬಂದರೆ ಅವರು ಮನೆಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.
ದುಬಾರಿ ವೆಚ್ಚದ ಮನೆ
ಮುಖೇಶ್ ಅಂಬಾನಿ ಕುಟುಂಬದ ಕನಸಿನ ಮನೆ ಆಂಟಿಲಿಯಾ. ಬರೋಬ್ಬರಿ 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. 2006 ರಲ್ಲಿ ಮನೆ ನಿರ್ಮಾಣವನ್ನು ಆರಂಭಿಸಿದ್ದು 2010ರಲ್ಲಿ ನಿರ್ಮಾಣವನ್ನು ಪೂರ್ಣಗೊಳಿಸಲಾಯಿತು.












Click it and Unblock the Notifications