ಬದರಿನಾಥ, ಕೇದಾರನಾಥ ಅಭಿವೃದ್ಧಿಗೆ 5 ಕೋಟಿ ದೇಣಿಗೆ ನೀಡಿದ ಮುಖೇಶ್ ಅಂಬಾನಿ
ಬದರಿನಾಥ, ಅ. 13: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಗುರುವಾರ ಬದರಿನಾಥ ಧಾಮ ಮತ್ತು ಕೇದಾರನಾಥ ಧಾಮಕ್ಕೆ ಭೇಟಿ ನೀಡಿ ಎರಡೂ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವರದಿಗಳ ಪ್ರಕಾರ, ಈ ವೇಳೆ ಮುಖೇಶ್ ಅಂಬಾನಿ ದೇವಸ್ಥಾನಗಳ ಜಂಟಿ ಸಮಿತಿಯಾದ ಬದ್ರಿ-ಕೇದಾರ ದೇವಾಲಯ ಸಮಿತಿಗೆ (BKTC) 5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ತಮ್ಮ ಸಂಗಡಿಗರೊಂದಿಗೆ ಮುಖೇಶ್ ಅಂಬಾನಿ ಹೆಲಿಕಾಪ್ಟರ್‌ನಲ್ಲಿ ಹಿಮಾಲಯದ ದೇವಸ್ಥಾನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು ಎಂದು ಬದ್ರಿ-ಕೇದಾರ್ ದೇವಾಲಯ ಸಮಿತಿ ಉಪಾಧ್ಯಕ್ಷ ಕಿಶೋರ್ ಪನ್ವಾರ್ ತಿಳಿಸಿದ್ದಾರೆ.

ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಅವರನ್ನು ಮದುವೆಯಾಗಲಿರುವ ರಾಧಿಕಾ ಮರ್ಚೆಂಟ್ ಅವರೊಂದಿಗೆ ಬದರಿನಾಥ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದ ಅಧಿಕಾರಿಗಳು ಮುಖೇಶ್ ಅಂಬಾನಿ ಜೊತೆಗೆ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಅಂಬಾನಿ ಕಳೆದ ಕೆಲವು ವಾರಗಳಿಂದ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಅವರು ಕಳೆದ ತಿಂಗಳು ಮೂರು ಪ್ರಸಿದ್ಧ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ದೇವಾಲಯದ ಟ್ರಸ್ಟ್‌ಗಳಿಗೆ ಇದೇ ಮೊತ್ತವನ್ನು ದೇಣಿಗೆ ನೀಡಿದ್ದರು.

ಕೇರಳದ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ರಿಲಯನ್ಸ್ ಮುಖ್ಯಸ್ಥರು ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ 'ಅನ್ನದಾನ' ನಿಧಿಗೆ 1.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು.
ಅದಕ್ಕೂ ಮುನ್ನ ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಂಬಾನಿ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಅವರು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
ಅಂಬಾನಿಯವರ ರಿಲಯನ್ಸ್ ಜಿಯೋ ಈ ವರ್ಷ ದೀಪಾವಳಿಯ ವೇಳೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ಹೈ-ಸ್ಪೀಡ್ 5G ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಡಿಸೆಂಬರ್ 2023 ರ ವೇಳೆಗೆ ದೇಶಾದ್ಯಂತ ತನ್ನ ನೆಟ್‌ವರ್ಕ್ ಅನ್ನು ಪ್ರತಿ ಪಟ್ಟಣ, ಗ್ರಾಮ ಮತ್ತು ತಾಲೂಕಿಗೆ ವಿಸ್ತರಿಸಲು ಯೋಜಿಸುತ್ತಿದೆ.
ಜಿಯೋ 5G ಯ ಇತ್ತೀಚಿನ ಆವೃತ್ತಿಯನ್ನು ಹೊರತರಲಿದೆ, ಇದನ್ನು ಸ್ವತಂತ್ರ 5G ಎಂದು ಕರೆಯಲಾಗುತ್ತದೆ. 5ಜಿ ಮೂಲಸೌಕರ್ಯಕ್ಕೆ 2 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲು ಯೋಜಿಸಿದೆ.












Click it and Unblock the Notifications