ಮಹಾರಾಷ್ಟ್ರದಲ್ಲಿ ಕೋತಿಗಳಿಗೆ ಗೌರವ; 32 ಎಕರೆ ಭೂಮಿ ಮಂಗಗಳ ಹೆಸರಿಗೆ!
ಮುಂಬೈ, ಅ. 19: ಸಾಮಾನ್ಯವಾಗಿ ಜನರು ಜಮೀನಿಗಾಗಿ ಕಿತ್ತಾಡುತ್ತಲೇ ಇರುತ್ತಾರೆ. ಹಲವು ಬಾರಿ ಸಂಬಂಧಗಳನ್ನು ಲೆಕ್ಕಿಸದೇ ಈ ಜಮೀನು ವಿವಾದ ಕೊಲೆಗಳಲ್ಲಿ ಮುಗಿದಿರುವ ಘಟನೆಗಳಿವೆ. ಇಂತಹ ಘಟನೆಗಳ ನಡುವೆಯೇ, ಮಹಾರಾಷ್ಟ್ರದಲ್ಲಿ ಮಂಗಗಳ ಹೆಸರಿಗೆ ಜಮೀನು ನೊಂದಣಿ ಮಾಡಿಸಲಾಗಿದೆ.
ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಗಳ ಹೆಸರಿಗೆ 32 ಎಕರೆ ಭೂಮಿಯನ್ನು ನೋಂದಾಯಿಸಲಾಗಿದೆ. ಮಂಗಗಳು ಅಪರೂಪದ ಗೌರವಕ್ಕೆ ಪಾತ್ರವಾಗಿವೆ.
ಉಸ್ಮಾನಾಬಾದ್‌ನ ಉಪ್ಲಾ ಗ್ರಾಮದ ಜನರು ಈ ಮಂಗಗಳು ಮನೆ ಬಾಗಿಲಿಗೆ ಬಂದಾಗಲೆಲ್ಲಾ ಅವುಗಳಿಗೆ ಆಹಾರ ನೀಡುವುದು, ಮದುವೆಗಳಲ್ಲಿ ಅವುಗಳಿಗೆ ವಿಶೇಷ ಸ್ಥಾನ ನೀಡುವ ಮೂಲಕ ಹೆಚ್ಚು ಗೌರವಿಸುತ್ತಾರೆ.

ಉಪ್ಲಾ ಗ್ರಾಮ ಪಂಚಾಯಿತಿಯಲ್ಲಿ ಪತ್ತೆಯಾದ ಭೂ ದಾಖಲೆಗಳಲ್ಲಿ 32 ಎಕರೆ ಜಮೀನನ್ನು ಗ್ರಾಮದಲ್ಲಿ ವಾಸಿಸುವ ಎಲ್ಲಾ ಮಂಗಗಳ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
"ಭೂಮಿಯು ಮಂಗಗಳಿಗೆ ಸೇರಿದ್ದು ಎಂದು ದಾಖಲೆಗಳು ಸ್ಪಷ್ಟವಾಗಿ ಹೇಳುತ್ತಿದ್ದರೂ, ಪ್ರಾಣಿಗಳಿಗಾಗಿ ಇದನ್ನು ಯಾರು ಮಾಡಿದ್ದಾರೆ ಮತ್ತು ಅದನ್ನು ಯಾವಾಗ ನೋಂದಣಿ ಮಾಡಲಾಗಿದೆ ಎಂಬುದು ತಿಳಿದಿಲ್ಲ" ಎಂದು ಗ್ರಾಮದ ಸರಪಂಚ (ಮುಖ್ಯಸ್ಥ) ಬಪ್ಪ ಪಡವಾಲ್ ತಿಳಿಸಿದ್ದಾರೆ.
ಈ ಹಿಂದೆ ಗ್ರಾಮದಲ್ಲಿ ನಡೆಯುವ ಎಲ್ಲಾ ಆಚರಣೆಗಳಲ್ಲಿಯೂ ಮಂಗಗಳು ಭಾಗವಹಿಸುತ್ತಿದ್ದವು ಎಂದು ಗ್ರಾಮದ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.

ಗ್ರಾಮದಲ್ಲಿ ಈಗ ಸುಮಾರು 100 ಮಂಗಗಳು ವಾಸಿಸುತ್ತಿವೆ. ಈ ಪ್ರಾಣಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯದ ಕಾರಣ ವರ್ಷ ವರ್ಷಕ್ಕೆ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಬಪ್ಪ ಪಡವಾಲ್ ಹೇಳಿದ್ದಾರೆ.
ಮಂಗಗಳ ಜಮೀನಿನಲ್ಲಿ ಅರಣ್ಯ ಇಲಾಖೆ ತೋಟಗಾರಿಕೆ ಇಲಾಖೆಯ ಕಾಮಗಾರಿ ನಡೆಸುತ್ತಿದೆ, ಕೆಲವೆಡೆ ಇರುವ ಜಮೀನಿನಲ್ಲಿ ಪಾಳು ಬಿದ್ದ ಮನೆಯೂ ಇವೆ ಎಂದರು.
ಈ ಹಿಂದೆ ಗ್ರಾಮದಲ್ಲಿ ಮದುವೆ ನಡೆದಾಗಲೆಲ್ಲಾ ಮಂಗಗಳಿಗೆ ಮೊದಲು ಉಡುಗೊರೆ ನೀಡಿ ನಂತರವೇ ಸಮಾರಂಭ ಆರಂಭವಾಗುತ್ತಿತ್ತು. ಈಗ ಎಲ್ಲರೂ ಈ ಪದ್ಧತಿ ಅನುಸರಿಸುತ್ತಿಲ್ಲ ಎಂದು ಗ್ರಾಮದ ಮುಖ್ಯಸ್ಥ ಹೇಳಿದ್ದಾರೆ.
ಮಂಗಗಳು ತಮ್ಮ ಮನೆಬಾಗಿಲಿನಲ್ಲಿ ಕಾಣಿಸಿಕೊಂಡಾಗ ಗ್ರಾಮಸ್ಥರು ಅವುಗಳಿಗೆ ಆಹಾರವನ್ನು ನೀಡುತ್ತಾರೆ. ಮಂಗಗಳಿಗೆ ಆಹಾರ ನೀಡದೆ ಯಾರು ವಾಪಸ್ ಕಳುಹಿಸುವುದಿಲ್ಲ ಎಂದಿದ್ದಾರೆ.












Click it and Unblock the Notifications