ಮೊಹಲ್ಲಾ ಅಸ್ಸಿ ವಿವಾದ: 'ಸನ್ನಿ' ವಿರುದ್ಧ ಎಫ್ ಐಆರ್
ವಾರಣಾಸಿ, ಜೂ.22: ವಿಶ್ವದ ಅತ್ಯಂತ ಪುರಾತನ ನಗರಿ, ಹಿಂದೂಗಳ ಪವಿತ್ರ ಕ್ಷೇತ್ರ ವಾರಣಾಸಿ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಚಿತ್ರಣವಿರುವ 'ಮೊಹಲ್ಲಾ ಅಸ್ಸಿ' ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲಿ ಅವಾಚ್ಯ, ಅಶ್ಲೀಲ ಪದಗಳ ಬಳಕೆ ಮಾಡಿರುವ ಆರೋಪ ಹೊರೆಸಿ ನಟ ಸನ್ನಿ ಡಿಯೋಲ್ ಹಾಗೂ ಚಿತ್ರಕರ್ಮಿ ಚಂದ್ರಪ್ರಕಾಶ್ ದ್ವಿವೇದಿ ವಿರುದ್ಧ ದೂರು ನೀಡಲಾಗಿದೆ.
ಸರ್ವಜನ ಜಾಗೃತಿ ಸಂಸ್ಥಾ ನೀಡಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಟ ಸನ್ನಿ ಡಿಯೋಲ್ ಹಾಗೂ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ವಿರುದ್ಧ ಎಫ್ ಐಆರ್ ಹಾಕಿದ್ದಾರೆ. ಭೇಲುಪುರ್ ಪೊಲೀಸ್ ಠಾಣೆ ಪೊಲೀಸರು ಈಗ ಚಿತ್ರದ ಟ್ರೈಲರ್ ಮತ್ತೆ ಮತ್ತೆ ನೋಡಿ ಆರೋಪಗಳ ಬಗ್ಗೆ ನೋಟ್ ಮಾಡಿಕೊಳ್ಳುತ್ತಿದ್ದಾರೆ.

ಹೆಸರಾಂತ ಲೇಖಕ ಕಾಶಿನಾಥ್ ಸಿಂಗ್ ಅವರ 'ಕಾಶಿ ಕಾ ಅಸ್ಸಿ' ಕಾದಂಬರಿ ಆಧಾರಿತ ಚಿತ್ರವಾಗಿರುವ ಮೊಹಲ್ಲಾ ಅಸ್ಸಿಯಲ್ಲಿ ಸನ್ನಿ ಡಿಯೋಲ್ ಅವರು ಪ್ರಮುಖ ಭೂಮಿಕೆಯಲ್ಲಿದ್ದರೆ, ರವಿ ಕಿಶನ್ ಹಾಗೂ ಸಾಕ್ಷಿ ಆನ್ವರ್ ಇನ್ನಿತರ ಪಾತ್ರಧಾರಿಗಳಾಗಿದ್ದಾರೆ.
ವಾರಣಾಸಿಯ ಸಂಸ್ಕೃತ ಟೀಚರ್ ಆಗಿ, ಸಾಂಪ್ರದಾಯಿಕ ಶೈಲಿಯ ಜೀವನ ನಡೆಸುವ ಪಾತ್ರಧಾರಿ, ಪಂಡಿತ್ ರೂಪದಲ್ಲಿ ಆಕ್ಷನ್ ಹೀರೋ ಸನ್ನಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಸನ್ನಿವೇಶಗಳು, ಡೈಲಾಗ್ ಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಇದೆ. ನಾವು ಇಂಥ ಚಿತ್ರವನ್ನು ರಿಲೀಸ್ ಆಗಲು ಬಿಡುವುದಿಲ್ಲ ಎಂದು ಹಿಂದೂ ಜಾಗೃತಿ ಸಂಸ್ಥಾ ಹೇಳಿದೆ. ಈ ಹಿಂದೆ ಚಾಣಕ್ಯ ಕುರಿತಂತೆ ಹಿಂದಿ ಧಾರಾವಾಹಿ ನಿರ್ಮಿಸಿ, ನಟಿಸಿ, ನಿರ್ದೇಶಿಸಿದ್ದ ಚಂದ್ರಪ್ರಕಾಶ್ ದ್ವಿವೇದಿ ಅವರು ಈಗ ವಾರಣಾಸಿಯ ಅಸಲಿ ಮುಖವನ್ನು ತೋರಿಸಲು ಈ ಚಿತ್ರದ ಮೂಲಕ ಯತ್ನಿಸುತ್ತಿದ್ದಾರೆ. ಚಿತ್ರದ ಟ್ರೈಲರ್ ಇಲ್ಲಿದೆ...
(ಒನ್ ಇಂಡಿಯಾ ಸುದ್ದಿ)












Click it and Unblock the Notifications