ಮೋದಿ, ಒಬಾಮಾ ಭೇಟಿಗೆ ಮುಹೂರ್ತ ಸಿಕ್ತು
ನವದೆಹಲಿ, ಸೆ.9 : ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭೇಟಿಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸೆ.29 ಮತ್ತು 30ರಂದು ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಶ್ವೇತ ಭವನದಲ್ಲಿ ಒಬಮಾ ಭೇಟಿ ಮಾಡಲಿದ್ದಾರೆ.
ಶ್ವೇತಭವನದಲ್ಲಿನ ಬರಾಕ್ ಒಬಾಮಾ ವಕ್ತಾರರು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಸೆ.29 ಮತ್ತು 30ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಒಬಾಮಾ ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಶುಭಾಶಯದ ತಿಳಿಸಿದ್ದ ಬರಾಕ್ ಒಬಮಾ ಅಮೆರಿಕಗೆ ಆಗಮಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡಿದ್ದರು. ನಂತರ ಅಮೆರಿಕದ ಉಪ ಕಾರ್ಯದರ್ಶಿ ವಿಲಿಯಂ ಜೆ ಬರ್ನ್ಸ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ, ಅಧಿಕೃತ ಆಹ್ವಾನವನ್ನು ನೀಡಿದ್ದರು. [ಒಬಾಮಾರಿಂದ ನರೇಂದ್ರ ಮೋದಿಗೆ ಅಧಿಕೃತ ಆಹ್ವಾನ]
ಈ ಭೇಟಿಯ ವೇಳೆ ಉಭಯ ನಾಯಕರು ಆರ್ಥಿಕ ಪ್ರಗತಿ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಸಿರಿಯಾ, ಆಫ್ತಾಘಾನಿಸ್ತಾನ್, ಇರಾಕ್‌ನಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಅವರು ಮೋದಿ ಮತ್ತು ಒಬಾಮಾ ಮಾತುಕತೆ ನಡೆಸುವ ಸಾಧ್ಯತೆ ಇದೆ.
2002ರ ಗುಜರಾತ್ ಗಲಭೆಗಳ ಬಳಿಕ ಮೋದಿಗೆ ವೀಸಾ ನೀಡಬೇಕೇ, ಬೇಡವೇ? ಎಂಬ ಜಿಜ್ಞಾಸೆಯಲ್ಲಿದ್ದ ಅಮೆರಿಕ ಇದೀಗ ಅವರನ್ನು ದೇಶದಕ್ಕೆ ಆಹ್ವಾನಿಸಿ, ಭೇಟಿ ಮಾಡುತ್ತಿದೆ. ಈಗಾಗಲೇ ಮೋದಿ ಜಪಾನ್, ನೇಪಾಳ ಮತ್ತು ಭೂತಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ.












Click it and Unblock the Notifications