ಕೊರೊನಾ: ಮೋದಿ ಸರಕಾರ ಇನ್ನಾದರೂ ರಾಹುಲ್ ಗಾಂಧಿ ಮಾತಿಗೆ ಮನ್ನಣೆ ನೀಡಲಿ
ಕೊರೊನಾ ವೈರಸ್ ವ್ಯಾಪಕವಾಗಿ ದೇಶಾದ್ಯಂತ ಹರಡುತ್ತಿದೆ. ಇದರೆ ಜೊತೆಗೆ, ಗುಣಮುಖರಾಗುತ್ತಿರುವವರ ಪ್ರಮಾಣವೂ ಹೆಚ್ಚಾಗುತ್ತಿರುವುದು ನೆಮ್ಮದಿಯ ವಿಚಾರ. ದೇಶದ ಕೆಲವೊಂದು ಜಿಲ್ಲೆಗಳು ಕೊರೊನಾ ಮುಕ್ತವಾಗುವತ್ತ ಸಾಗುತ್ತಿವೆ.
ಕೊರೊನಾ ವೈರಸಿನ ಗಂಭೀರತೆಯನ್ನು ಮೋದಿ ಸರಕಾರ ಅರಿಯುವ ಮುನ್ನವೇ, ಎಐಸಿಸಿ ಮಾಜಿ ಅಧ್ಯಕ್ಷ, ವಯನಾಡು ಕ್ಷೇತ್ರದ ಸಂಸದ, ರಾಹುಲ್ ಗಾಂಧಿ, ಕೇಂದ್ರ ಸರಕಾರವನ್ನು ಎಚ್ಚರಿಸಿದ್ದರು.
ಆದರೆ, ರಾಹುಲ್ ಗಾಂಧಿ ಎಚ್ಚರಿಕೆಯನ್ನು ಕೇಂದ್ರ ಆರೋಗ್ಯ ಇಲಾಖೆ ಸೇರಿ, ಅಣಕವಾಡಿದವರೇ ಹೆಚ್ಚು. ಸಾಮಾಜಿಕ ತಾಣದಲ್ಲಂತೂ ರಾಹುಲ್ ಹೇಳಿಕೆಗೆ ಇನ್ನಿಲ್ಲದಂತೇ ವ್ಯಂಗ್ಯವಾಡಲಾಯಿತು.
ಅಂದು, ರಾಹುಲ್ ಹೇಳಿಕೆಯ ನಂತರ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದ್ದರೆ, ಕೊರೊನಾ ವೈರಸಿನ ಆರ್ಭಟ ಇಷ್ಟು ಇರುತ್ತಿರಲಿಲ್ಲ ಎಂದರೆ, ಇದನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆ ಕಮ್ಮಿ.

ಮೋದಿ ಸರಕಾರ, ಇದನ್ನು ಗಂಭೀರವಾಗಿ ತೆಗೆದುಕೊಂಡ ಹಾಗೇ ಕಾಣುವುದಿಲ್ಲ
ಫೆಬ್ರವರಿಯಲ್ಲಿ ರಾಹುಲ್ ಗಾಂಧಿ, ಮೋದಿ ಸರಕಾರವನ್ನು ಅಲರ್ಟ್ ಮಾಡಿದ್ದರು. ಕೊರೊನಾ ಭಾರೀ ತೊಂದರೆ ಉಂಟು ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ. ಚೀನಾ, ಇಟೆಲಿ, ಸ್ಪೇನ್ ನಲ್ಲಿ ರುದ್ರನರ್ತನ ಮಾಡುತ್ತಿದೆ ಎಂದು ಹೇಳಿದ್ದರು. ""ಕೊರೊನಾ ಎನ್ನುವುದು ಇಡೀ ಜಗತ್ತಿಗೆ ಬಹುದೊಡ್ಡ ಗಂಢಾಂತರವನ್ನು ತರಲಿದೆ. ಇದು ನಮ್ಮ ಜನರಿಗೆ ಮತ್ತು ನಮ್ಮ ಆರ್ಥಿಕತೆಗೆ ಪೆಟ್ಟನ್ನು ನೀಡಲಿದೆ. ಮೋದಿ ಸರಕಾರ, ಇದನ್ನು ಗಂಭೀರವಾಗಿ ತೆಗೆದುಕೊಂಡ ಹಾಗೇ ಕಾಣುವುದಿಲ್ಲ" ಎಂದು ರಾಹುಲ್, 12.02.2020ರಂದು ಟ್ವೀಟ್ ಮಾಡಿದ್ದರು.

ವಿಮಾನ ನಿಲ್ದಾಣದಲ್ಲಿ ತಪಾಸಣೆ ಕಾಟಾಚಾರ
ರಾಹುಲ್ ಎಚ್ಚರಿಕೆಯ ನಂತರವೂ ವಿಮಾನ ನಿಲ್ದಾಣದಲ್ಲಿ ತಪಾಸಣೆ ಕಾಟಾಚಾರಕ್ಕೆ ಮಾತ್ರ ಇತ್ತು. ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿರಲಿಲ್ಲ. ಥರ್ಮಾ ಟೆಸ್ಟಿಂಗ್ ಬಿಟ್ಟರೆ, ಕೊರೊನಾ ವಿಚಾರದಲ್ಲಿ, ಪಾಲಿಸಬೇಕಾದ ಮುಂಜಾಗೃತಾ ಕ್ರಮಕ್ಕೆ ಆದ್ಯತೆಯನ್ನು ನೀಡಿರಲಿಲ್ಲ.

ಲಾಕ್ ಡೌನ್, ಕೊರೊನಾ ತಡೆಗಟ್ಟಲು ಪರಿಹಾರವಲ್ಲ
ಕೆಲವು ದಿನಗಳ ಕೆಳಗೆ, ರಾಹುಲ್ ಗಾಂಧಿ ಮತ್ತೊಂದು ಹೇಳಿಕೆಯನ್ನು ನೀಡಿದ್ದರು. ಲಾಕ್ ಡೌನ್, ಕೊರೊನಾ ತಡೆಗಟ್ಟಲು ಪರಿಹಾರವಲ್ಲ. ಕೊರೊನಾದಿಂದ ದೇಶದ ಜನತೆಗೆ ತೊಂದರೆಯಾಗಿರಬಹುದು. ಆದರೆ, ಇದಕ್ಕೆ ಲಸಿಕೆ ಕಂಡುಕೊಳ್ಳಲು ಇದು ಸದಾವಕಾಶ ಎಂದಿದ್ದರು.

ಭಾರತೀಯ ಆಹಾರ ನಿಗಮ
ಭಾರತೀಯ ಆಹಾರ ನಿಗಮದಲ್ಲಿ (FCI) ಹೆಚ್ಚುವರಿಯಾಗಿ ಉಳಿದ ಅಕ್ಕಿಯನ್ನು ಮಿಥೆನಾಲ್ ಆಗಿ ಪರಿವರ್ತಿಸಿ ಸ್ಯಾನಿಟೈಸರ್ ತಯಾರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಈ ವಿಚಾರದಲ್ಲೂ, ರಾಹುಲ್ ಗಾಂಧಿ, ಮೋದಿ ಸರಕಾರವನ್ನು ಎಚ್ಚರಿಸಿದ್ದಾರೆ. ದೇಶದಲ್ಲಿ ಬಡವರು ಹಸಿವಿನಿಂದ ಬಳಲುತ್ತಿರುವಾಗ ಸ್ಯಾನಿಟೈಸರ್ ಬಳಕೆಗೆ ಬಡವರ ಅಕ್ಕಿಯನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಮನ್ನಾ
ಇದಲ್ಲದೇ, ಈ ಸಮಯದಲ್ಲಿ ತುರ್ತಾಗಿ ಕೆಲಸ ಆಗಬೇಕಿದೆ ಎಂದು ರಾಹುಲ್ ಇನ್ನೊಂದು ವಿಚಾರವನ್ನು ಪ್ರಸ್ತಾವಿಸಿದ್ದರು. ಕೋವಿಡ್ -19 ಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಹಾಗೂ ಸ್ಯಾನಿಟೈಸರ್ ಉಪಕರಣಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಮನ್ನಾ ಮಾಡಬೇಕೆಂದು ರಾಹುಲ್ ಗಾಂಧಿ, ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.












Click it and Unblock the Notifications