Cyclone Mocha: ಮತ್ತಷ್ಟು ತೀವ್ರವಾಗಲಿದೆ ಚಂಡಮಾರುತ; ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ
ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಈ ಚಂಡಮಾರುತ ಈಗ ಅತ್ಯಂತ ಅಪಾಯಕಾರಿ ಸ್ವರೂಪವನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜ್ಯಗಳಲ್ಲಿ ಕಟ್ಟೆಚ್ಚರವಹಿಸಲು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಈಶಾನ್ಯ ಭಾಗದತ್ತ ಸಂಚರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಉತ್ತರ ಈಶಾನ್ಯ ಭಾಗದಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ ಎಂದಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಆಗ್ನೇಯ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕರಾವಳಿಯನ್ನು ಬಾಂಗ್ಲಾದೇಶದ ಕಾಕ್ಸ್ ಬಜಾರ್ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಕ್ಯೌಕ್ಪಿಯು ಪ್ರದೇಶದ ಮೂಲಕ ಮೇ 14, 2023ರ ಮಧ್ಯಾಹ್ನದ ವೇಳೆಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಚಂಡಮಾರುತದ ವೇಗ 150-160 ಕಿ.ಮೀಗಿಂತ 175 ಕಿ.ಮೀಗೆ ಏರಿಕೆಯಾಗುವ ಸಾಧ್ಯತೆಯಿದೆ.

ಮ್ಯಾನ್ಮಾರ್ ಬಾಂಗ್ಲಾದೇಶದಲ್ಲಿ ಸಾವಿರಾರು ಜನರ ಸ್ಥಳಾಂತರ
ಮೋಚಾ ಚಂಡಮಾರುತದ ಪರಿಣಾಮ ತೀವ್ರವಾಗುತ್ತಿರುವ ಪರಿಣಾಮವಾಗಿ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದಲ್ಲಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಾಗಿದೆ. 175 ಕಿ.ಮೀಗಿಂತಲೂ ಅಧಿಕ ವೇಗದಲ್ಲಿ ಚಂಡಮಾರುವ ಬೀಸುವ ಸಾಧ್ಯತೆಯಿರುವ ಕಾರಣ ಅಪಾಯಕಾರಿ ಸ್ಥಳಗಳಲ್ಲಿರುವ ಜನರನ್ನು ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿದೆ.
ವಿಶ್ವ ಹವಾಮಾನ ಸಂಸ್ಥೆಯ ವಕ್ತಾರರು ಕೂಡ ಶುಕ್ರವಾರ ಮೋಚಾ ಚಂಡಮಾರುತದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮೋಚಾ ಚಂಡಮಾರುತವು ವೇಗವಾಗಿ ತೀವ್ರತೆ ಪಡೆದುಕೊಂಡಿದೆ. ಈ ವಾರಾಂತ್ಯದಲ್ಲಿ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಭೂಪ್ರದೇಶಗಳಿಗೆ ಅಪ್ಪಳಿಸಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಹಾನಿಯುಂಟು ಮಾಡುವ ಸಾಧ್ಯತೆಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಭಾರತದಲ್ಲಿ ಚಂಡಮಾರುತ ಮೋಚಾದಿಂದಾಗಿ ಇಡೀ ಪೂರ್ವ ಭಾರತದ ಮೇಲೆ ಶುಷ್ಕ ಮತ್ತು ಭೂಖಂಡದ ಗಾಳಿ ಬೀಸುತ್ತಿದೆ ಎಂದು ಐಎಂಡಿ ಮಹಾನಿರ್ದೇಶಕ ಎಂ ಮೊಹಾಪಾತ್ರ ಹೇಳಿಕೆ ನೀಡಿದ್ದರು. ಅಲ್ಲದೆ ಮೇ 13 ಮತ್ತು 14 ರಂದು ಈಶಾನ್ಯ ರಾಜ್ಯಗಳಲ್ಲಿ ಪ್ರಬಲ ಗಾಳಿಯಿಂದ ಕೂಡ ಮಳೆ ಸುರಿಯಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications