ಸೋನಿಯಾ ಗಾಂಧಿ ದೆಹಲಿಯ ಆಸ್ಪತ್ರೆಗೆ ದಾಖಲು
ನವದೆಹಲಿ, ಸೆಪ್ಟೆಂಬರ್ 03; ಕಾಂಗ್ರೆಸ್ ಸಂಸದೀಯ ಮಂಡಳಿಯ ಮುಖ್ಯಸ್ಥೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ವೈದ್ಯರ ತಂಡ ನಿಗಾ ಇರಿಸಿದೆ, ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋನಿಯಾ ಗಾಂಧಿಯನ್ನು ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಭಾನುವಾರ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಣ್ಣಗಿನ ಜ್ವರ ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

76 ವರ್ಷದ ಸೋನಿಯಾ ಗಾಂಧಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾವಹಿಸಿದೆ ಎಂದು ಆಸ್ಪತ್ರೆ ಹೇಳಿದೆ.
2024ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿಯೇತರ ವಿರೋಧ ಪಕ್ಷಗಳು I. N. D. I. A ಎಂಬ ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಈ ಮೈತ್ರಿಕೂಟದ ಸಭೆ ಗುರುವಾರ ಮತ್ತು ಶುಕ್ರವಾರ ಮುಂಬೈನಲ್ಲಿ ನಡೆದಿತ್ತು.
ಶುಕ್ರವಾರ ಬೆಳಗ್ಗೆ ವಿಮಾನದ ಮೂಲಕ ಪುತ್ರ ರಾಹುಲ್ ಗಾಂಧಿ ಜೊತೆಗೆ ಸೋನಿಯಾ ಗಾಂಧಿ ಮುಂಬೈಗೆ ತೆರಳಿದ್ದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಅವರು ದೆಹಲಿಗೆ ವಾಪಸ್ ಆಗಿದ್ದರು.
ಈ ವರ್ಷದ ಮಾರ್ಚ್ ತಿಂಗಳಿನಲ್ಲಿಯೂ ಜ್ವರದ ಕಾರಣ ಸೋನಿಯಾ ಗಾಂಧಿ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿಯೇ ಅವರು ಸದಾ ಚಿಕಿತ್ಸೆಯನ್ನು ಪಡೆಯುತ್ತಾರೆ.
ಈ ವರ್ಷದ ಜನವರಿಯಲ್ಲಿ ಸೋನಿಯಾ ಗಾಂಧಿ ಉಸಿರಾಟದ ತೊಂದರೆಯ ಕಾರಣ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದಲ್ಲಿನ ವೈರಾಣು ಸೋಕಿನಿಂದ ಅವರು ಬಳಲುತ್ತಿದ್ದರು. ಆಗ ಆಸ್ಪತ್ರೆಯ ಡಾ. ಅನುಪ್ ಬಸು ತಂಡ ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡಿತ್ತು.
Congress Parliamentary Party Chairperson Sonia Gandhi has been admitted to Delhi's Sir Gangaram Hospital with symptoms of mild fever. She is under doctors' observation and is currently stable: Sources pic.twitter.com/9uuZz8n4ra
— ANI (@ANI) September 3, 2023
ಈಗ ಆಸ್ಪತ್ರೆಗೆ ದಾಖಲಾಗಿರುವ ಸೋನಿಯಾ ಗಾಂಧಿ ಆರೋಗ್ಯದ ಕುರಿತು ಸರ್ ಗಂಗಾರಾಮ್ ಆಸ್ಪತ್ರೆ ಯಾವುದೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿಲ್ಲ. ಭಾನುವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಯಾವುದೇ ಕಾಂಗ್ರೆಸ್ ಪಕ್ಷದ ನಾಯಕರು ಇದುವರೆಗೂ ಸೋನಿಯಾ ಗಾಂಧಿ ಆರೋಗ್ಯದ ಕುರಿತಾಗಲಿ ಅಥವ ಆಸ್ಪತ್ರೆಗೆ ದಾಖಲು ಮಾಡಿರುವ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ.












Click it and Unblock the Notifications