ಕನ್ನಡ ಸೀರಿಯಲ್‌ನಂತೆ ಗಂಡ ಫಿಟ್ ಇದ್ರೂ ಮೆಂಟಲ್ ಮಾಡಿದ ಪತ್ನಿ, ಕೋರ್ಟಿಂದ ಸಿಕ್ತು ಬಿಡುಗಡೆಯ ಭಾಗ್ಯ
Mental Health Care: ಕನ್ನಡ ಸೀರಿಯಲ್ಸ್‌ನಲ್ಲಿ ಕಥೆಗೆ ಹೋಲಿಕೆ ಇರೋ ಘಟನೆ. ಕೆಟ್ಟ ಮನಸ್ಸಿನ ಹೆಂಡತಿ, ಗಂಡನನ್ನು ಮಾನಸಿಕ ಅಸ್ವಸ್ಥನೆಂದು ಕೂಡಿ ಹಾಕುವುದೋ, ಬೇಕಾ ಬಿಟ್ಟಿ ಮಾತ್ರೆ ಕೊಟ್ಟು ಸದಾ ನಿದ್ರಿಸುವಂತೆ ಮಾಡುವುದೋ ನೋಡಿದ್ದೇವೆ. ಆದರೆ, ಇದು ರೀಲ್ ಲೈಫ್ ಆಗಿರೋದ್ರಿಂದ ಗಂಡ ಅದನ್ನು ಅನುಭವಿಸಿಕೊಂಡು ಸುಮ್ಮನಿರುತ್ತಾರೆ. ಇದನ್ನೇ ಹೋಲುವ ನೈಜ ಘಟನೆಯೊಂದು ನಡೆದಿದ್ದು, ಇಲ್ಲಿ ಸ್ವಲ್ಪ ಟ್ವಿಸ್ಟ್ ಇದೆ. ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ, ಪತ್ನಿಯ ಈ ಕೃತ್ಯವನ್ನು ಬಹು ಬೇಗ ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದಾನೆ. ಅಷ್ಟಕ್ಕೂ ಈ ಘಟನೆಯಲ್ಲಿ ಆಗಿದ್ದೇನು?

ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವುದು ಗಾದೆ ಮಾತು. ಇಬ್ಬರ ನಡುವೆ ಸರಸ ಮನಸ್ತಾಪ ಏನೇ ಆದರೂ ಅದು ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕು ಎನ್ನುವುದು ಹಿರಿಯರ ಮಾತು. ಆದರೆ ಈಗ ಈ ಮಾತುಗಳು ಅರ್ಥ ಕಳೆದುಕೊಳ್ತಾ ಇದೆ. ಸಣ್ಣ ವಿಚಾರಗಳಿಗೂ ಕೋರ್ಟ್ ಮೆಟ್ಟಿಲೇರುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಇದರ ಮಧ್ಯೆ ಉತ್ತರಖಂಡದಲ್ಲಿ ನಡೆದಿರುವ ಈ ಘಟನೆ ಇನ್ನೂ ವಿಚಿತ್ರವಾಗಿದೆ.
Mental Health Care ಸೆಂಟರ್‌ನಲ್ಲಿ ಪತಿ :
ಇಲ್ಲಿ ತನ್ನನ್ನು ಸುಖಾ ಸುಮ್ಮನೆ ಮೆಂಟಲ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಇರಿಸಲಾಗಿದೆ ಎಂದು ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದಾರೆ. ತನ್ನ ಇಚ್ಛೆಗೆ ವಿರುದ್ಧವಾಗಿ ಇಲ್ಲಿ ಅಡ್ಮಿಟ್ ಮಾಡಲಾಗಿದೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. 42 ಈ ಸೆಂಟರ್‌ನಲ್ಲಿರುವುದಾಗಿ ಅರ್ಜಿಯಲ್ಲಿ ಹೇಳಿದ್ದಾರೆ. ತನಗೆ ಇಲ್ಲಿ ಇರುವುದು ಇಷ್ಟವಿಲ್ಲ, ಆದಷ್ಟು ಬೇಗ ಮನೆಗೆ ಹೋಗಬೇಕು ಎಂದು ಕೋರ್ಟ್ ಗೆ ತಿಳಿಸಿದ್ದಾರೆ.
ಇಚ್ಛೆಗೆ ವಿರುದ್ದವಾಗಿ ಅಡ್ಮಿಟ್ :
ಅಸಲಿಗೆ ಈ ವ್ಯಕ್ತಿಯನ್ನು ಮೆಂಟಲ್ ಹೆಲ್ತ್ ಕೇರ್ ಸೆಂಟರ್ಗೆ ಹಾಕಿರುವುದು ಅವರ ಪತ್ನಿ. ಇಲ್ಲಿ ಇನ್ನೂ ವಿಶೇಷ ಅಂದರೆ ಈ ವ್ಯಕ್ತಿ ಮತ್ತು ಅವರ ಪತ್ನಿ ಈಗಾಗಲೇ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ. ಅಂದರೆ ಇವರ ಡಿವೋರ್ಸ್ ಕೇಸ್ ಕೂಡಾ ನಡೀತಾ ಇದೆ. ಈ ಮಧ್ಯೆ ಪತ್ನಿ ಯಾಕೆ ಇವರನ್ನು ಮೆಂಟಲ್ ಹೆಲ್ತ್ ಕೇರ್ ಸೆಂಟರ್ ಗೆ ಅಡ್ಮಿಟ್ ಮಾಡಿಸಿದ್ದಾರೆ ಎನ್ನುವುದು ಪ್ರಶ್ನೆ. ವ್ಯಕ್ತಿಯ ಇಚ್ಚೆಗೆ ವಿರುದ್ಧವಾಗಿ ಯಾರನ್ನೇ ಇಂಥಹ ಕೇಂದ್ರದಲ್ಲಿ ಇರಿಸುವ ಮೊದಲು ಕಾನೂನು ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ಆದರೆ ಇಲ್ಲಿ ಅದ್ಯಾವುದನ್ನೂ ಮಾಡದೆ ನೇರವಾಗಿ ಅಡ್ಮಿಟ್ ಮಾಡಿರುವುದನ್ನು ವ್ಯಕ್ತಿಯ ಲಾಯರ್ ಪ್ರಶ್ನೆ ಮಾಡಿದ್ದಾರೆ.
ಆದರೆ ಈ ವ್ಯಕ್ತಿಗೆ ಹೊರಗೆ ಹೋಗಲು ಮನಸ್ಸಾದಾಗ ಅವರು ಹೋಗಬಹುದು. ಮೆಂಟಲ್ ಹೆಲ್ತ್ ಕೇರ್ ಆಕ್ಟ್ 2017ರ ಪ್ರಕಾರವೇ ಅವರನ್ನು ಇಲ್ಲಿ ಇರಿಸಲಾಗಿದೆ. ಅಲ್ಲದೆ ಇಲ್ಲಿಗೆ ಸೇರಿಸುವ ಮೊದಲು ಸೂಕ್ತ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬ್ಲಡ್ ಟೆಸ್ಟ್ ಕೂಡಾ ಮಾಡಲಾಗಿದೆ ಎನ್ನುವುದು ಎದುರು ಪಾರ್ಟಿ ವಕೀಲರ ವಾದ.
ಕೋರ್ಟ್ ಹೇಳಿದ್ದೇನು ?:
ಇಲ್ಲಿ ಕೋರ್ಟ್ ಮಾನಸಿಕ ಆರೋಗ್ಯ (mental health) ಕಾಯ್ದೆಯ ಸೆಕ್ಷನ್ 89ನ್ನು ಗಣನೆಗೆ ತೆಗೆದುಕೊಂಡಿದೆ. ಒಬ್ಬ ವ್ಯಕ್ತಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗದೇ ಹೋದಾಗ ಅವರನ್ನು 30 ದಿನಗಳವರೆಗೆ ಮೆಂಟಲ್ ಹೆಲ್ತ್ ಸೆಂಟರ್‌ನಲ್ಲಿ ಇರಿಸಬಹುದು. ಆದರೆ ಇದಕ್ಕೂ ಮೊದಲು ವ್ಯಕ್ತಿಯನ್ನು ಮನೋವೈದ್ಯರು ಪರೀಕ್ಷೆ ಮಾಡಬೇಕು. ಮೆಂಟಲ್ ಹೆಲ್ತ್ ಪ್ರೊಫೆಶನಲಿಸ್ಟ್ ಮತ್ತು ವೈದ್ಯರು ಕೂಡಾ ಟೆಸ್ಟ್ ಮಾಡಬೇಕು. ವ್ಯಕ್ತಿ ತನಗೆ ಅಥವಾ ಬೇರೆಯವರಿಗೆ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ, ತನ್ನನ್ನು ತಾನು ನೋಡಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ವ್ಯಕ್ತಿಯನ್ನ ಟೆಸ್ಟ್ ಮಾಡಿರುವ ಎಲ್ಲರೂ ಬರಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇವರನ್ನು ಸೆಂಟರ್ಗೆ ಸೇರಿಸುವ ಮುನ್ನ ಈ ಎಲ್ಲಾ ಪ್ರಕ್ರಿಯೆ ಮಾಡಲಾಗಿದೆಯೇ ಅಗತ್ಯವಿರುವ ಎಲ್ಲಾ ಸರ್ಟಿಫಿಕೇಟ್ ಇದೆಯಾ ಎಂದು ಜಡ್ಜ್ ಪ್ರಶ್ನೆ ಮಾಡಿದ್ದಾರೆ. ಆದರೆ ವಕೀಲರ ಬಳಿ ಇದಕ್ಕೆ ಉತ್ತರ ಇರಲಿಲ್ಲ. ಅವರ ಬಳಿ ಇದ್ದದ್ದು ಒಂದೇ ವೈದ್ಯರು ಮಾಡಿರುವ ಬ್ಲಡ್ ಟೆಸ್ಟ್ ರಿಪೋರ್ಟ್ ಮಾತ್ರ. ಆ ವ್ಯಕ್ತಿ ಆಲ್ಕೋಹಾಲ್ ಮತ್ತು ಗಾಂಜಾ ಸೇವಿಸುತ್ತಾರೆ ಎನ್ನುವುದನ್ನು ಬ್ಲಡ್ ಟೆಸ್ಟ್ ರಿಪೋರ್ಟ್ ಹೇಳಿದೆ. ಕುಡಿಯುತ್ತಾರೆ, ಗಾಂಜಾ ಸೇವಿಸುತ್ತಾರೆ ಎನ್ನುವುದನ್ನು ಮೆಂಟಲ್ ಪ್ರಾಬ್ಲಂ ಎಂದು ಕರೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಬಿಡುಗಡೆ ಮಾಡಿದ ನ್ಯಾಯಾಲಯ :
ವಿಚಾರಣೆಯ ಸಮಯದಲ್ಲಿ ವ್ಯಕ್ತಿ ತಾನು ಮನೆಗೆ ಹೋಗಬೇಕು ಎಂದು ಪದೇ ಪದೇ ಹೇಳ್ತಾ ಇದ್ದರು. ಹೆಂಡತಿಯೊಂದಿಗಿನ (wife) ವಿವಾದ ಇನ್ನೂ ಬಗೆಹರಿದಿಲ್ಲ ಎನ್ನುವುದನ್ನು ಕೂಡಾ ಅವರು ಹೇಳಿದರು. ಅಲ್ಲದೆ ಒಂದು ತಿಂಗಳಿಗೂ ಹೆಚ್ಚು ಕಾಲ ಯಾಕೆ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಇರಿಸಬೇಕು ಎನ್ನುವುದಕ್ಕೆ ಸೂಕ್ತ ದಾಖಲೆ ಕೂಡಾ ಇರಲಿಲ್ಲ. ಹಾಗಾಗಿ ತನ್ನನ್ನು ಮನೆಗೆ ಕಳುಹಿಸುವಂತೆ ಕೇಳಿಕೊಂಡರು. ಈ ಕೇಸ್ ಅನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಮೂರ್ತಿ ರವೀಂದ್ರ ಮೈಥಾನಿ ಮತ್ತು ನ್ಯಾಯಮೂರ್ತಿ ಸಿದ್ಧಾರ್ಥ ಸಾಹ್ ಅವರನ್ನೊಳಗೊಂಡ ನ್ಯಾಯಪೀಠವು ಸೆಕ್ಷನ್ 89 ರ ಅಡಿಯಲ್ಲಿ ವ್ಯಕ್ತಿಗೆ ಮೆಂಟಲ್ ಪ್ಲಾಬ್ಲಂ ಇದೆ ಎನ್ನುವುದನ್ನು ಸಾಬೀತು ಪಡಿಸುವ ಯಾವುದೇ ದಾಖಲೆ ಇಲ್ಲ ಹಾಗಾಗಿ ಅವರು ಮಾನಸಿಕ ಅಸ್ವಸ್ಥರಲ್ಲ ಎಂದು ಅಭಿಪ್ರಾಯಪಟ್ಟಿದೆ.
ವ್ಯಕ್ತಿಯ ಮನವಿ ಮತ್ತು ಇಚ್ಛೆಯಂತೆ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಅರ್ಜಿಯನ್ನು ವಿಲೇವಾರಿ ಮಾಡಿ, ವ್ಯಕ್ತಿ ತನಗೆ ಮನಸ್ಸಿರುವಲ್ಲಿಗೆ ಹೋಗಬಹುದು ಎಂದು ಕೋರ್ಟ್ ಅನುಮತಿ ನೀಡುತ್ತದೆ.


Click it and Unblock the Notifications
