Constitution Debate: ಸಾವರ್ಕರ್ ಪ್ರಕಾರ ಮನುಸ್ಮೃತಿ ಸಂವಿಧಾನಕ್ಕಿಂತ ಮಿಗಿಲು- ಬಿಜೆಪಿ ಯಾರ ಪರ? ರಾಹುಲ್ ಗಾಂಧಿ ಪ್ರಶ್ನೆ
ಭಾರತ ಸಂವಿಧಾನದ 75ನೇ ವರ್ಷಾಚರಣೆಯ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಡಳಿತಾರೂಢ ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವಾದಿ ಸಾವರ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿಂದು ನಡೆದ ಸಂವಿಧಾನ ಚರ್ಚೆಯಲ್ಲಿ ಅನೇಕ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸಿದರು.
ಭಾರತದ ಆಡಳಿತ ವ್ಯವಸ್ಥೆ ಮನುಸ್ಮೃತಿಯನ್ನು ಪಾಲಿಸಬೇಕು ಎಂದು ವೀರ್ ಸಾವರ್ಕರ್ ಹೇಳಿದ್ದರು. ಈ ವೀರ್ ಸಾವರ್ಕರ್ ಅನುಸರಿಸುವ ಬಿಜೆಪಿ ನಾಯಕರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸಂವಿಧಾನದ ಪರವೋ, ಸಾರ್ವಕರ್ ಪಾಲಿಸುವ ಮನುಸ್ಮೃತಿ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು.

ಲೋಕಸಭಾ ಚುನಾವಣೆಗೂ ಮುನ್ನ ಬಂದಿದ್ದ ಸಂವಿಧಾನ ಬದಲಾವಣೆ ಹಾಗೂ ಬಿಜೆಪಿ ಸಂವಿಧಾನ ವಿರೋಧಿ ಎಂಬ ಚಿತ್ರಣವನ್ನು ರಾಹುಲ್ ಗಾಂಧಿ ಲೋಕಸಭಾ ಕಲಾಪದಲ್ಲಿ ಮತ್ತೆ ಪ್ರಸ್ತಾಪಿಸಿದರು. ಇಂದು ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ ಅವರು ದೇಶದಲ್ಲಿ ಮನುಸ್ಮೃತಿಯೇ ಸಂವಿಧಾನವಾಗಿದೆ. ಸಾವರ್ಕರ್ ಮನುಸ್ಮೃತಿಯನ್ನು ಕಾನೂನು ಎಂದಿದ್ದರು. ಸಂವಿಧಾನದಲ್ಲಿ ಸ್ವಲ್ಪವೂ ಭಾರತೀಯತೆ ಇಲ್ಲ ಎಂದಿದ್ದರು. ಆದರೆ ನಮ್ಮ ಸಂವಿಧಾನ ಭಾರತದ ದಾಖಲೆಯಾಗಿದೆ ಎಂದು ಹೇಳಿದರು.
ಕೀಳು ಜಾತಿಯವನು ಎನ್ನುವ ಕಾರಣಕ್ಕೆ ವಿದ್ಯೆಯನ್ನೇ ಕಲಿಸದೇ ದ್ರೋಣಚಾರ್ಯರು ಗುರುದಕ್ಷಣೆಯಾಗಿ ಏಕಲವ್ಯನಿಂದ ಹೆಬ್ಬೆರಳು ಪಡೆದರು. ಹೆಬ್ಬೆರಳು ಕೈಗೆ ಮುಖ್ಯವಾಗಿದೆ. ದ್ರೋಣಾಚಾರ್ಯರು ಹೇಗೆ ಏಕಲವ್ಯನ ಹೆಬ್ಬೆರಳು ಕತ್ತರಿಸಿದರೋ ಹಾಗೇ ನೀವೂ ದೇಶದ ಹೆಬ್ಬೆರಳು ಕತ್ತರಿಸಿದ್ದೀರಿ ಎಂದು ಬಿಜೆಪಿ ಮೇಲೆ ಆರೋಪಿಸಿದರು.
ಅದಾನಿಗೆ ಧಾರವಿ ಕೊಟ್ಟು ಉದ್ಯಮ ನಡೆಸುತ್ತಿದ್ದ ಜನರ ಹೆಬ್ಬೆರಳು ಕತ್ತರಿಸಿದ್ದೀರಿ. ಪೇಪರ್ ಲೀಕ್, ಅಗ್ನೀವೀರ್ ಜಾರಿ ಮಾಡಿ ಯುವಕ ಹೆಬ್ಬೆರಳು ಕತ್ತರಿಸಿದ್ದೀರಿ. ಬೆಂಬಲ ಬೆಲೆ ಕೇಳುವ ರೈತರ ಮೇಲೆ ಟಿಯರ್ ಗ್ಯಾಸ್ ಬಳಕೆ ಮಾಡುವ ಮೂಲಕ ರೈತರ ಹೆಬ್ಬೆರಳು ಕತ್ತರಿಸಿದ್ದೀರಿ. ಸಂವಿಧಾನದಲ್ಲಿ ಜನರ ಬೆರಳು ಕತ್ತರಿಸಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳಿ ಎಂದು ಹೇಳಿಲ್ಲ ಆದರೆ ನೀವು ಅವಕಾಶಗಳನ್ನು ಕಿತ್ತುಕೊಂಡಿದ್ದೀರಿ ಎಂದು ರಾಹುಲ್ ಗಾಂಧಿ ದೂರಿದರು.
ಅದಾನಿ ಹೆಸರು ಪ್ರಸ್ತಾಪಿಸಿ ಹಿಂದೂಸ್ತಾನ್ ಫೋರ್ಟ್ಸ್, ಏರ್‌ಪೋರ್ಟ್ಸ್, ಡಿಫೈನ್ಸ್, ಕೈಗಾರಿಕೆ ಅದಾನಿಗೆ ನೀಡಿದ್ದೀರಿ ಪ್ರಮಾಣಿಕವಾಗಿ ಕೆಲಸ ಮಾಡುವವರ ಬೆರಳುಗಳನ್ನು ಕತ್ತರಿಸಿದ್ದೀರಿ. ಅಂಬಾನಿಗೆ ಲಾಭ ಮಾಡಿಕೊಡಲು ರೈತರ ಬೆರಳು ಕತ್ತರಿಸಿದ್ದೀರಿ ಎಂದು ಹೇಳಿದರು.
ಸಂವಿಧಾನದಲ್ಲಿ ಅಗ್ನಿವೀರ್ ಮಾಡಿ ಎಂದಿಲ್ಲ. ಸಂವಿಧಾನದಲ್ಲಿ ಎಲ್ಲಿಯೂ ಏಕಸ್ವಾಮ್ಯ ಮಾಡಿ ಎಂದು ಹೇಳಿಲ್ಲ, ಸಂವಿಧಾನದಲ್ಲಿ ಯುವಜನತೆಯ ಬೆರಳು ಕತ್ತರಿಸಿ ಎಂದು ಹೇಳಿಲ್ಲ ಎಂದು ಗುಡುಗಿದ ರಾಹುಲ್ ಗಾಂಧಿ, ನಾನು ಹತ್ರಾಸ್‌ಗೆ ಭೇಟಿ ನಿಡಿದ್ದೇನೆ. ಅಲ್ಲಿ ಹೆಣ್ಣು ಮಕ್ಕಳ ಮೇಲೆ ಭೀಕರ ದೌರ್ಜನ್ಯ ನಡೆಯುತ್ತಿದೆ. ಅನಾಚಾರಕ್ಕೊಳಗಾದ ಯುವತಿಯ ಅಂತ್ಯಸಂಸ್ಕಾರ ಮಾಡಲು ಕೂಡ ಬಿಡಲಿಲ್ಲ ಎಂದು ರಾಹುಲ್ ಗಾಂಧಿ ಗುಡುಗಿದರು.












Click it and Unblock the Notifications