Manipur violence: ಮಣಿಪುರದಲ್ಲಿ ನಿಲ್ಲದ ಗುಂಡಿನ ಸದ್ದು, 16 ಮಂದಿ ಗಾಯಾಳು
ಇಂಫಾಲ್, ಜೂನ್. 04: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಗುಂಡಿನ ಸದ್ದು ನಿಲ್ಲುವಂತೆ ಕಾಣಿಸುತ್ತಿಲ್ಲ. ಕಾಂಗ್‌ಪೊಕ್ಪಿ ಜಿಲ್ಲೆಯ ಗಡಿಯಲ್ಲಿರುವ ಇಂಫಾಲ್ ಪೂರ್ವದ ಫಾಯೆಂಗ್ ಪ್ರದೇಶದಲ್ಲಿ ಶುಕ್ರವಾರ ನಡೆದ "ಭಾರೀ ಗುಂಡಿನ ಚಕಮಕಿಯಲ್ಲಿ" ಕನಿಷ್ಠ 16 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗಾಯಗೊಂಡವರಲ್ಲಿ ಹೆಚ್ಚಿನವರು ಕಣಿವೆಯಿಂದ ಬಂದವರಾಗಿದ್ದು, ಒಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ ಗಾಯಾಳುಗಳು ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಮೇ ಆರಂಭದಲ್ಲಿ ಮಣಿಪುರದಲ್ಲಿ ಪ್ರಾರಂಭವಾದ ಘರ್ಷಣೆಯ ನಂತರ, ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿದ್ದರು. ಇಂಫಾಲ್‌ನಿಂದ ಅಮಿತ್ ಶಾ ಹೊರಟ ಒಂದು ದಿನದ ನಂತರ ಈ ಘಟನೆ ನಡೆದಿದೆ. ಈ ಭೇಟಿಯ ವೇಳೆ ರಾಜ್ಯದ ವಿವಿಧ ಸಮುದಾಯಗಳ ನಾಯಕರನ್ನು ಅಮಿತ್ ಶಾ ಭೇಟಿಯಾಗಿದ್ದರು.
ಶುಕ್ರವಾರ, ಬೆಳಗ್ಗೆ 9.30 ರ ಸುಮಾರಿಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು ಮತ್ತು ಸಂಜೆಯವರೆಗೂ ಇದು ಮುಂದುವರೆಯಿತು ಎಂದು ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಅತ್ಯಾಧುನಿಕ ಆಯುಧಗಳನ್ನು ಹೊಂದಿದ್ದ ಮೂವರು ದುಷ್ಕರ್ಮಿಗಳು ಬೆಳಗ್ಗೆ 9.30 ರ ಸುಮಾರಿಗೆ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೂ ಮೊದಲು ಅವರ ತೋಟದ ಮನೆಗೆ ಬೆಂಕಿ ಹಚ್ಚಿದರು ಎಂದು ಫಯೆಂಗ್ ನಿವಾಸಿ ಅಂಗೋಮ್ ರಬಿಕಾಂತ ತಿಳಿಸಿದ್ದಾರೆ.
"ಕುಕಿ ಉಗ್ರಗಾಮಿಗಳೆಂದು ಶಂಕಿಸಲಾದ" ಮೂವರು ಬೆಟ್ಟಗಳ ಬದಿಯಿಂದ ಕೆಳಗಿಳಿದು "ನನ್ನ ತೋಟದ ಮನೆಗೆ ಬೆಂಕಿ ಹಚ್ಚಿದರು" ಎಂದು ರಬಿಕಾಂತ ಹೇಳಿದ್ದಾರೆ. ಇದೆ ಬೆನ್ನಲ್ಲೇ ಪರವಾನಗಿ ಪಡೆದ ಆಯುಧಗಳೊಂದಿಗೆ ಶಸ್ತ್ರಸಜ್ಜಿತವಾದ ಗ್ರಾಮಸ್ಥರು ದುಷ್ಕರ್ಮಿಗಳಿಗೆ ಎದುರೇಟು ನೀಡಲು ನಿಂತರು. ಕೊನೆಗೆ ಹತ್ತಿರದ ಬೆಟ್ಟಕ್ಕೆ ಓಡಿಹೋದರು ಎಂದು ಸ್ಥಳೀಯ ರಬಿಕಾಂತ ಹೇಳಿದ್ದಾರೆ.

ಸುದ್ದಿ ಹರಡುತ್ತಿದ್ದಂತೆ, ಅಕ್ಕಪಕ್ಕದ ಪ್ರದೇಶಗಳ ವಿವಿಧ ಭಾಗಗಳಿಂದ ನೂರಾರು ಜನರು, ಅವರಲ್ಲಿ ಅನೇಕರು ಕೆಲವು ಸ್ವಯಂಚಾಲಿತ ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಗ್ರಾಮಕ್ಕೆ ಧಾವಿಸಿದ್ದರು. ಈ ಶಸ್ತ್ರಸಜ್ಜಿತ ವ್ಯಕ್ತಿಗಳ ನಡುವೆ ತೀವ್ರವಾದ ಗುಂಡಿನ ದಾಳಿ ನಡೆಯಿತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಮೇ 3 ರಂದು ಮೊದಲು ಘರ್ಷಣೆಗಳು ಪ್ರಾರಂಭವಾದಾಗಿನಿಂದ ಕುಕಿ ಉಗ್ರಗಾಮಿಗಳೆಂದು ಶಂಕಿಸಲಾದ ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ದಾಳಿಗೊಳಗಾದ ಇಂಫಾಲ್‌ನ ಬಾಹ್ಯ ಪ್ರದೇಶಗಳಲ್ಲಿನ ಹಲವಾರು ಗ್ರಾಮಗಳಲ್ಲಿ ಫಯೆಂಗ್ ಕೂಡ ಒಂದಾಗಿದೆ. ಕಳೆದ ಮೇ 28 ರಂದು ಒಬ್ಬ ಗ್ರಾಮಸ್ಥನನ್ನು ಹತ್ಯೆ ಮಾಡಲಾಗಿದೆ. ಮೇ 3 ರಂದು ಭುಗಿಲೆದ್ದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 98 ಜೀವಗಳು ಬಲಿಯಾಗಿವೆ. ಸುಮಾರು 4,000 ಶಸ್ತ್ರಾಸ್ತ್ರಗಳನ್ನು ರಾಜ್ಯ ಪಡೆಗಳು ಮತ್ತು ಪೊಲೀಸರ "ಶಸ್ತ್ರಾಗಾರದಿಂದ ಲೂಟಿ ಮಾಡಲಾಗಿದೆ" ಎಂದು ಸೆಕ್ರೆಟರಿಯೇಟ್ ನೀಡಿದ ಹೇಳಿಕೆ ತಿಳಿಸಿದೆ.
ಕಳವಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸಶಸ್ತ್ರ ಪಡೆಗಳು ಗುರುವಾರದಿಂದ ರಾಜ್ಯಾದ್ಯಂತ ಬೃಹತ್ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಶನಿವಾರ ಭದ್ರತಾ ಪಡೆಗಳು ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿ, ರಾಜ್ಯ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯೊಂದಿಗೆ ಮಣಿಪುರದಾದ್ಯಂತ ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ಸೇನೆಯ ಹೇಳಿಕೆ ತಿಳಿಸಿದೆ.
ಮಾನವರಹಿತ ವೈಮಾನಿಕ ವಾಹನಗಳು ಮತ್ತು ಕ್ವಾಡ್‌ಕಾಪ್ಟರ್‌ಗಳ ಕಣ್ಗಾವಲು ಕವರ್ ಅಡಿಯಲ್ಲಿ ನಡೆಸಲಾದ ಕಾರ್ಯಾಚರಣೆಗಳು ಇದುವರೆಗೆ ಸುಮಾರು 40 ಶಸ್ತ್ರಾಸ್ತ್ರಗಳನ್ನು (ಹೆಚ್ಚಾಗಿ ಸ್ವಯಂಚಾಲಿತ), ಮೋರ್ಟಾರ್‌ಗಳು, ಮದ್ದುಗುಂಡುಗಳು ಮತ್ತು ಇತರವುಗಳನ್ನು ವಶಪಡಿಸಿಕೊಂಡಿವೆ. ಹೇಳಿಕೆಯ ಪ್ರಕಾರ, ಸ್ಥಳೀಯ ಜನರಿಗೆ ಕಿರುಕುಳವಾಗದಂತೆ ಮತ್ತು ವೈಯಕ್ತಿಕ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಈ ಕಾರ್ಯಾಚರಣೆಗಳ ಸಮಯದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶುಕ್ರವಾರ 144 ಶಸ್ತ್ರಾಸ್ತ್ರಗಳು ಮತ್ತು 11 ಮ್ಯಾಗಜೀನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ 29 ಎಸ್‌ಎಲ್‌ಆರ್‌ಗಳು, 15 ಕಾರ್ಬೈನ್‌ಗಳು, 12 ಐಎನ್‌ಎಸ್‌ಎಎಸ್, 10 ಗ್ರೆನೇಡ್ ಲಾಂಚರ್‌ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications