Manipur Video: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ 79 ದಿನಗಳ ಬಳಿಕ ಮೊದಲ ಬಾರಿ ಮಾತನಾಡಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 20: ಮಣಿಪುರದಲ್ಲಿ ( Manipur ) ಭೀಕರ ಜನಾಂಗೀಯ ಸಂಘರ್ಷಗಳು ಭುಗಿಲೆದ್ದು 79 ದಿನಗಳು ಉರುಳಿವೆ. ಗಲಭೆಯಲ್ಲಿ ಸುಮಾರು 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹತ್ತಾರು ಸಾವಿರ ಜನರು ನಿರಾಶ್ರಿತರಾಗಿ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ 79 ದಿನಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ( PM Modi ) ಮಾತನಾಡಿದ್ದಾರೆ.
ಮಣಿಪುರಲ್ಲಿ ಬುಧವಾರ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಅವರನ್ನು ದೈಹಿಕವಾಗಿ ಹಿಂಸಲಾಗಿದೆ. ಈ ಘಟನೆ ಕುರಿತ ವಿಡಿಯೊ ವೈರಲ್ ಆಗಿದ್ದು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಸುಪ್ರೀಂ ಕೋರ್ಟ್ ಸೇರಿದಂತೆ ವಿರೋಧ ಪಕ್ಷಗಳು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಮಣಿಪುರದ ವಿಡಿಯೊ ಕುರಿತು ಸಂಸತ್ ಭವನದ ಎದುರು ಮಾತನಾಡಿರುವ ಪ್ರಧಾನಿ ಮೋದಿ, 'ಇಂದು ನಾನು ನಿಮ್ಮ ನಡುವೆ ಬಂದು, ಪ್ರಜಾಪ್ರಭುತ್ವದ ಈ ದೇವಾಲಯದ ಬಳಿ ನಿಂತಿದ್ದೇನೆ. ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿ ಹೋಗಿದೆ' ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಬೆಳಕಿಗೆ ಬಂದಿರುವ ಘಟನೆ ಯಾವುದೇ ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಮಣಿಪುರದ ಹೆಣ್ಣುಮಕ್ಕಳಿಗೆ ಆಗಿರುವುದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ್ದಾರೆ.
ಈ ಘಟನೆಯು ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ತಪ್ಪಿತಸ್ಥರನ್ನು ಸುಮ್ಮನೇ ಬಿಡಲಾಗುವುದಿಲ್ಲ ಎಂದು ಮೋದಿ ಗುರುವಾರ ಬೆಳಿಗ್ಗೆ ಹೇಳಿದ್ದಾರೆ.

'ತಮ್ಮ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ನಾನು ಎಲ್ಲಾ ಮುಖ್ಯಮಂತ್ರಿಗಳನ್ನು ಕೇಳುತ್ತೇನೆ. ಅದರಲ್ಲೂ ನಮ್ಮ ತಾಯಂದಿರು ಮತ್ತು ಸಹೋದರಿಯರ ರಕ್ಷಣೆಗೆ ಸಂಬಂಧಿಸಿದಂತೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು' ಎಂದು ಮೋದಿ ತಿಳಿಸಿದ್ದಾರೆ.
ರಾಜಸ್ಥಾನ, ಛತ್ತೀಸ್‌ಗಢ ಅಥವಾ ಮಣಿಪುರವಾಗಿರಲಿ, ಮಹಿಳೆಯರ ಗೌರವವನ್ನು ಕಾಪಾಡಬೇಕಿದೆ. ಈ ದೇಶದ ಯಾವುದೇ ಮೂಲೆಯಲ್ಲಿರುವ ಮಹಿಳೆಯರು ಗೌರವಕ್ಕೆ ಅರ್ಹರು. ರಾಜಕಾರಣಿಗಳು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಮೇಲೇರಬೇಕು ಎಂದು ಮೋದಿ ಹೇಳಿದ್ದಾರೆ.
ಕಳೆದ 2.5 ತಿಂಗಳಿಂದ ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಬಹಿರಂಗ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಮೋದಿ ಅವರ ಮೌನವನ್ನು ದೇಶದ ನಾಯಕರು ಟೀಕಿಸುತ್ತಿದ್ದಾರೆ. ಆದರೂ, ಮೋದಿ ಈ ಬಗ್ಗೆ ಮಾತನಾಡದೇ ಮೌನವಾಗಿದ್ದರು.

ಮಣಿಪುರ ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರ ರಾಜೀನಾಮೆಗೂ ವಿರೋಧ ಪಕ್ಷಗಳು ಒತ್ತಡ ಹೇರುತ್ತಾ ಬಂದಿವೆ. ಆದರೆ, ಅವರು ಸಹ ರಾಜೀನಾಮೆ ನೀಡಿಲ್ಲ. ಇದು ದೇಶದೆಲ್ಲಡೆ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವೇಳೆ, ಮಣಿಪುರ ಹಿಂಸಾಚಾರವನ್ನು ಸಂಸತ್ತಿನಲ್ಲಿ ತಕ್ಷಣವೇ ಚರ್ಚಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ವಿಡಿಯೊ ತೆಗೆದುಹಾಕುವಂತೆ ಸೂಚಿಸಿದ ಕೇಂದ್ರ ಸರ್ಕಾರ
ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಪುರುಷರ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ. ಆ ಸಮಯದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವೈರಲ್ ವಿಡಿಯೊವನ್ನು ತೆಗೆದುಹಾಕುವಂತೆ ಕೇಂದ್ರವು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಗೆ ಹೇಳಿದೆ. ಸರ್ಕಾರದ ಸೂಚನೆಗೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಕೆಲವು ಖಾತೆಗಳಿಂದ ಮಾಡಲಾಗಿರುವ ಟ್ವಿಟ್‌ಗಳನ್ನು ತಡೆಹಿಡಿಯಲಾಗಿದೆ.












Click it and Unblock the Notifications