ಮನೆಯಿಲ್ಲದ 'ಮಾಣಿಕ್ಯ' ಮಾಣಿಕ್ ಸರ್ಕಾರ್ ಪಕ್ಷದ ಕಚೇರಿಯಲ್ಲೇ ವಾಸ್ತವ್ಯ!
ಅಗರ್ತಲಾ, ಮಾರ್ಚ್ 8: ಅವರು ಭಾರತದಲ್ಲೇ ದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗಳಲ್ಲೊಬ್ಬರು. ಸತತ 20 ವರ್ಷ ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ, ಅತೀ ಬಡವರು. ಇರಲೊಂದು ಮನೆಯೂ ಅವರಿಗಿಲ್ಲ. ಮೊನ್ನೆಯ ಚುನಾವಣೆಗೆ ಅಫಿಡವಿಟ್ ಸಲ್ಲಿಸಿದಾಗ ಅವರ ಬಳಿಯಲ್ಲಿದ್ದುದು ಕೇವಲ 2,410 ರೂಪಾಯಿ. ಅವರ ಹೆಸರೇ ಮಾಣಿಕ್ ಸರ್ಕಾರ್.
ಕಳೆದ ಶನಿವಾರ ತ್ರಿಪುರಾ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಇದೇ ಮಾಣಿಕ್ ಸರ್ಕಾರ್ ಅವರ ಸಿಪಿಐಎಂ ಪಕ್ಷ ದಯನೀಯ ಸೋಲು ಕಂಡಿತ್ತು. ಪರಿಣಾಮ ಅವರೀಗ ತಮ್ಮ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದಾರೆ. ಜತೆಗೆ ನಿವಾಸವನ್ನೂ ಖಾಲಿ ಮಾಡಬೇಕಾಗಿದೆ.
ಆದರೆ ಏನು ಮಾಡುವುದು. ಮಾಣಿಕ್ ಸರ್ಕಾರ್ ಬಳಿಯಲ್ಲಿ ಮನೆಯಿಲ್ಲ. ಕೈಯಲ್ಲಿ ಹಣವೂ ಇಲ್ಲ. ಹಾಗಂಥ ಇರುವ ಮನೆಯಲ್ಲೇ ಇರುವಂತಿಲ್ಲ. ತ್ರಿಪುರಾದಲ್ಲಿ ನೂತನ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಮಾಣಿಕ್ ಸರ್ಕಾರ್ ಅವರಿರುವ ನಿವಾಸಕ್ಕೆ ಹೊಸ ಮುಖ್ಯಮಂತ್ರಿ ಆಗಮಿಸಲಿದ್ದಾರೆ.

ಹೀಗಾಗಿ ಮನೆ ಇಲ್ಲದ ಬಡ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಪಕ್ಷದ ರಾಜ್ಯ ಕಚೇರಿಗೆ ತಮ್ಮ ವಾಸ್ತವ್ಯ ಬದಲಿಸಲಿದ್ದಾರೆ.
ಅಗರ್ತಲಾದ ಮಾರ್ಕ್ಸ್ ಏಂಗಲ್ಸ್ ಸರಣಿ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸವನ್ನು ಗುರುವಾರ ಸಂಜೆ ಅವರು ಖಾಲಿ ಮಾಡಲಿದ್ದು ಇಲ್ಲಿಂದ 500 ಮೀಟರ್ ದೂರದಲ್ಲಿರುವ ಪಕ್ಷದ ಕಚೇರಿಗೆ ವಾಸ್ತವ್ಯ ಬದಲಿಸಲಿದ್ದಾರೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಬಿಜನ್ ಧಾರ್ ಹೇಳಿದ್ದಾರೆ.
"ಕೆಲವೇ ಗಂಟೆಗಳಲ್ಲಿ ಪಕ್ಷದ ಕಚೇರಿಗೆ ಅವರು ಬರಲಿದ್ದಾರೆ. ಪಕ್ಷದ ಕಚೇರಿಯ ಅತಿಥಿ ಗೃಹದ ಒಂದು ಕೋಣೆಯಲ್ಲಿ ತಮ್ಮ ಪತ್ನಿ ಪಾಂಚಾಲಿ ಭಟ್ಟಾಚಾರ್ಯ ಜತೆ ಮಾಣಿಕ್ ಸರ್ಕಾರ್ ಉಳಿಯಲಿದ್ದಾರೆ," ಎಂದು ಅವರು ಮಾಹಿತಿ ನೀಡಿದ್ದಾರೆ.
ಪಕ್ಷದ ಕಚೇರಿಯ ಅಡುಗೆ ಮನೆಯಲ್ಲಿ ತಯಾರಿಸುವ ಖಾದ್ಯಗಳನ್ನೇ ಮಾಣಿಕ್ ಸರ್ಕಾರ್ ತಿನ್ನಲಿದ್ದಾರೆ ಎಂದು ಸಿಪಿಐಎಂ ಕಚೇರಿ ಕಾರ್ಯದರ್ಶಿ ಹರಿಪಾದ ದಾಸ್ ಹೇಳಿದ್ದಾರೆ.
"ಈಗಾಗಲೇ ಅವರು ಪುಸ್ತಕ, ಕೆಲವು ಬಟ್ಟೆ ಮತ್ತು ಸಿಡಿಗಳನ್ನು ಪಕ್ಷದ ಕಚೆರಿಗೆ ತಂದಿದ್ದಾರೆ. ಒಂದೊಮ್ಮೆ ಹೊಸ ಸರಕಾರ ಅವರಿಗೆ ಸರಕಾರಿ ನಿವಾಸವನ್ನು ನೀಡಿದರೆ ಅವರು ಅಲ್ಲಿಗೆ ತೆರಳಲೂಬಹುದು ಎಂದು ದಾಸ್ ತಿಳಿಸಿದ್ದಾರೆ. ಆದರೆ ಸದ್ಯ ಪಕ್ಷದ ಕಚೇರಿಯಲ್ಲೇ ಅವರು ಉಳಿಯಲಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಮಾಣಿಕ್ ಸರ್ಕಾರ್ ಪತ್ನಿ, ಮಾರ್ಕ್ಸ್ ಸಾಹಿತ್ಯ ಮತ್ತು ಕೆಲವು ಪುಸ್ತಕಗಳನ್ನು ಪಕ್ಷದ ಲೈಬ್ರೆರಿಗೆ ಮತ್ತು ಇಲ್ಲಿನ ಬಿರ್ಚಂದ್ರ ಕೇಂದ್ರ ಗ್ರಂಥಗಾಲಯಕ್ಕೆ ನೀಡುವುದಾಗಿ ಹೇಳಿದ್ದರು.
ಅಂದಹಾಗೆ ಮಾಣಿಕ್ ಸರ್ಕಾರ್ ದಂಪತಿಗಳಿಗೆ ಯಾವುದೇ ಮಕ್ಕಳಿಲ್ಲ.












Click it and Unblock the Notifications