Love Breakup: ಲವ್ ಬ್ರೇಕಪ್ ಆಗಿದೆ ಒಂದು ವಾರ ರಜೆ ಕೊಡಿ ಎಂದ ಉದ್ಯೋಗಿ; ಆಮೇಲೆ ಆಗಿದ್ದೇನು?
ಸಾಮಾನ್ಯವಾಗಿ ಕಚೇರಿಯಲ್ಲಿ ರಜೆ ಪಡೆಯಲು ಉದ್ಯೋಗಿಗಳು ಗಲವು ಕಾರಣಗಳನ್ನು ಕೊಡುತ್ತಾರೆ. ಆರೋಗ್ಯ ಸರಿಯಿಲ್ಲವೆಂದು, ಪ್ರವಾಸ ಹೋಗಬೇಕೆಂದು, ಮದುವೆ, ಸಾವು ಸೇರಿದಂತೆ ಅನೇಕ ಕಾರಣಗಳನ್ನು ಕೊಟ್ಟು ರಜೆ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ವಿಶೇಷ ಕಾರಣಕ್ಕೆ ರಜೆ ಬೇಕೆಂದು ಕೇಳಿದ್ದು, ಅಚ್ಚರಿ ಮೂಡಿಸಿದ್ದಾರೆ.
ಹಿರಿಯ ಕಾರ್ಪೊರೇಟ್ ಉದ್ಯೋಗಿಯೊಬ್ಬರು ಇತ್ತೀಚೆಗೆ ತಮ್ಮ ಯುವ ಸಹೋದ್ಯೋಗಿಯೊಬ್ಬರ ಬಗ್ಗೆ ಪೋಸ್ಟ್ ಮಾಡಿದ್ದು, ಚರ್ಚೆಯನ್ನು ಹುಟ್ಟುಹಾಕಿದೆ, ಪ್ರಾಜೆಕ್ಟ್‌ನ ನಿರ್ಣಾಯಕ ಹಂತದಲ್ಲಿ ಉದ್ಯೋಗಿ ಒಂದು ವಾರ ರಜೆ ಬೇಕೆಂದು ಕೇಳಿದ್ದಾರೆ. ಅದಕ್ಕೆ ಕಾರಣ ಕೂಡ ಕೊಟ್ಟಿದ್ದು, ಅದೇ ಈಗ ಟೀಂ ಲೀಡ್‌ಗೆ ಅಚ್ಚರಿ ಮೂಡಿಸಿದೆ. ಲವ್ ಬ್ರೇಕಪ್ ಆಗಿದೆ ಎನ್ನುವ ಕಾರಣ ಕೊಟ್ಟು ತನಗೆ ಅದನ್ನು ಮರೆಯಲು ಒಂದು ವಾರ ರಜೆ ಬೇಕೆಂದು ಕೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು ಹಲವು ಜನ ಹಲವು ರೀತಿಯ ಅಭಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲಸ - ಜೀವನದ ಸಮತೋಲನ, ಭಾವನಾತ್ಮಕ ವಿಚಾರಗಳಿಗೆ ಯುವ ಪೀಳಿಗೆ ನೀಡುತ್ತಿರುವ ಆದ್ಯತೆಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.
ಲವ್ ಬ್ರೇಕಪ್ ಮರೆಯಬೇಕು...
ಸಾಮಾಜಿಕ ಮಾಧ್ಯಮ ಬಳಕೆದಾರ ಕೃಷ್ಣ ಮೋಹನ್ ಎನ್ನುವವರು Gen Z ಸಹೋದ್ಯೋಗಿಯೊಂದಿಗೆ ಕೆಲಸ ಮಾಡುತ್ತಿರುವ ಅನುಭವ ಹಂಚಿಕೊಂಡಿದ್ದಾರೆ. ಪ್ರಾಜೆಕ್ಟ್‌ನ ನಿರ್ಣಾಯಕ ಸಮಯದಲ್ಲಿ ಉದ್ಯೋಗಿ ರಜೆ ಪಡೆದುಕೊಂಡರು. ಲವ್ ಬ್ರೇಕಪ್ ಆಗಿದ್ದು ಅದನ್ನು ಮರೆಯಲು ಚಾರಣ ಹೋಗಲು ನಿರ್ಧರಿಸಿದ್ದರು.
"ನನ್ನ Gen z (ಯುವ ಪೀಳಿಗೆ) ತಂಡದ ಸದಸ್ಯರೊಬ್ಬರು ಇದ್ದಕ್ಕಿದ್ದಂತೆ ಒಂದು ವಾರ ರಜೆ ಬೇಕೆಂದು ಕೇಳಿದರು. ನಮ್ಮ ಪ್ರಾಜೆಕ್ಟ್ ನಿರ್ಣಾಯಕ ಹಂತದಲ್ಲಿದ್ದ ಕಾರಣ ನಾನು ಈ ಬಗ್ಗೆ ಆತನ ಬಳಿ ಚರ್ಚೆ ಮಾಡಿದೆ. ಆದರೆ ಆತ ರಜೆ ಬೇಕೇ ಬೇಕು ಎಂದು ಕೇಳಿದ. ಲವ್ ಬ್ರೇಕಪ್ ಆಗಿರುವ ಕಾರಣ ರಜೆ ಹಾಕಿದ್ದು ನಾನು ಮಲೆನಾಡಿಗೆ ಚಾರಣ ಹೋಗಬೇಕು ಎನ್ನುವ ಕಾರಣ ಕೊಟ್ಟಿದ್ದಾನೆ" ಎಂದು ಎಕ್ಸ್‌ನಲ್ಲಿ ಕೃಷ್ಣ ಮೋಹನ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಹಲವರಿಂದ ಟೀಕೆ
ಈ ಪೋಸ್ಟ್ ಅನ್ನು ಹಲವರು ಟೀಕಿಸಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಮಾನಸಿಕ ಆರೋಗ್ಯದ ಮಹತ್ವವನ್ನು ಒತ್ತಿಹೇಳಿದ್ದಾರೆ. ಇನ್ನೂ ಕೆಲವರು ರಜೆ ಕೇಳಿದ ಯುವಕನ ಕೆಲಸದ ವಿಧಾನವನ್ನು ಟೀಕಿಸಿದ್ದಾರೆ. ಆತ ಮಾನಸಿಕವಾಗಿ ಉತ್ತಮವಾಗಿಲ್ಲದ ಸಂದರ್ಭದಲ್ಲಿ ಕೆಲಸ ಮಾಡಿಸಿಕೊಳ್ಳುವುದಕ್ಕಿಂತೆ ರಜೆ ನೀಡುವುದೇ ಉತ್ತಮ, ಕೆಲವೊಮ್ಮೆ ಇಂತಹ ಸನ್ನಿವೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಕೆಲವರು ಇದು ನಮಗೆ ತಮಾಷೆಯ ವಿಚಾರವೇ ಇರಬಹುದು. ಆದರೆ ಆತನ ಮಾನಸಿಕ ಸ್ಥಿತಿ ಬಗ್ಗೆ ಕೂಡ ಯೋಚಿಸಬೇಕಾಗುತ್ತದೆ. ಎಲ್ಲರ ಭಾವನೆಗಳಿಗೆ ಬೆಲೆ ಕೊಡುವುದನ್ನು ಕಲಿಯೋಣ ಎಂದು ಹೇಳಿದ್ದಾರೆ.












Click it and Unblock the Notifications