ಸಾಮೂಹಿಕ ವಿವಾಹ ಸಮಾರಂಭದಲ್ಲೇ ಮಗನ ಮದುವೆ ನೆರವೇರಿಸಿದ ಪ್ರಭಾವಿ ಮುಖ್ಯಮಂತ್ರಿ
ಸಾಮಾನ್ಯವಾಗಿ ರಾಜಕಾರಣಿಗಳ ಮನೆಯಲ್ಲಿ ನಡೆಯೋ ಶುಭಸಮಾರಂಭಗಳು ದುಬಾರಿಯಾಗಿರುತ್ತೆ. ಒಬ್ಬ ಶಾಸಕನ ಮಕ್ಕಳ ಮದುವೆಯನ್ನೇ ಈಗೆಲ್ಲ ಇಡೀ ರಾಜ್ಯ ತಿರುಗಿ ನೋಡುವ ಹಾಗೆ ಕೋಟಿಗಟ್ಟಲೆ ಖರ್ಚು ಮಾಡಿ ಅದ್ಧೂರಿಯಾಗಿ ಮಾಡ್ತಾರೆ. ಕರ್ನಾಟಕದಲ್ಲಿರುವ ಬಹುತೇಕ ಎಲ್ಲ ರಾಜಕಾರಣಿಗಳ ಮಕ್ಕಳ ಮದುವೆಯಂತೂ ಒಂದಕ್ಕಿಂತ ಒಂದು ದುಬಾರಿ ಎನಿಸಿಕೊಂಡಿದೆ. ಆದರೆ ಸಿಎಂ ಪುತ್ರನೊಬ್ಬ ಸಾಮೂಹಿಕ ವಿವಾಹ ಸಮಾರಂಭದಲ್ಲೇ ತನ್ನ ಮದುವೆ ಸರಳವಾಗಿ ಮಾಡಿಕೊಂಡಿದ್ದಾರೆ. ಈ ಮೂಲಕ ಆಡಂಬರದ ಮದುವೆಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ಇದನ್ನು ನೋಡಿದವರು ನಿಜಕ್ಕೂ ಒಬ್ಬ ಸಿಎಂ ಮಗನ ಮದುವೆ ಇಷ್ಟು ಸಿಂಪಲ್ ಆಗಿ ನಡೆಯುತ್ತಾ? ಎಂದು ಶಾಕ್ ಕೂಡ ಆಗಿದ್ದಾರೆ.
ರಾಜಕಾರಣಿಗಳು ಮತದಾರರನ್ನು ಸೆಳೆಯಲು ಹತ್ತಾರು ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಾರೆ. ಆದೆ ತಮ್ಮ ಪುತ್ರನ ಮದುವೆಯನ್ನು ಇದೇ ರೀತಿ ಸರಳವಾಗಿ ನೆರವೇರಿಸೋ ಧೈರ್ಯ ಮಾಡೋದು ಕಡಿಮೆ. ಆದರೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರ ಮಗನ ಮದುವೆಯು ಈ ಮಾತನ್ನು ಸುಳ್ಳು ಮಾಡಿದೆ. ಮಧ್ಯಪ್ರದೇಶದ ಪವಿತ್ರ ನಗರ ಉಜ್ಜಯಿನಿಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕಿರಿಯ ಮಗ ಅಭಿಮನ್ಯು ಯಾದವ್ ಹಾಗೂ ಇಶಿತಾ ಯಾದವ್ ಅವರು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೋಹನ್ ಯಾದವ್ ಅವರ ಮಗ ಮತ್ತು ವಧು ಮಾಲ್ವಾ ಪರಂಪರೆಯ ಹಳ್ಳಿಗಾಡಿನ ಮೋಡಿಯನ್ನು ಸಾಕಾರಗೊಳಿಸುವ ಎತ್ತಿನ ಬಂಡಿಯಲ್ಲಿ ಈ ಸಮಾರಂಭಕ್ಕೆ ಆಗಮಿಸಿದರು. ಸಿಎಂ ಮೋಹನ್ ಯಾದವ್ ಭಾನುವಾರ ಉಜ್ಜಯಿನಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಮ್ಮ ಮಗ ಅಭಿಮನ್ಯು ವಿವಾಹ ನೆರವೇರಿಸಿದ್ದಾರೆ.
ಯಾದವ್ ಅವರ ಮಗ 21 ಜೋಡಿಗಳ ನಡುವೆ ವಿವಾಹವಾಗಿದ್ದಾರೆ. ವಿವಿಧ ಸಮುದಾಯಗಳ ಜನರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಎಂಟು ತಿಂಗಳ ಹಿಂದೆ ಯಾದವ್ ಅವರ ಮಗನ ವಿವಾಹವನ್ನು ಡಾ.ಇಶಿತಾ ಅವರೊಂದಿಗೆ ನಿಶ್ಚಯಿಸಲಾಗಿತ್ತು. ಆಗ ಅವರು ತಮ್ಮ ಮಗ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗುವುದಾಗಿ ಹೇಳಿದ್ದರು. ಅದರಂತೆ ಇಂದು ಇತರ ರಾಜಕಾರಣಿಗಳಿಗೆ ಅವರು ಮಾದರಿಯಾಗಿದ್ದಾರೆ.
ಈ ನಿರ್ಧಾರಕ್ಕೆ ಕಾರಣವೇನು?
ಪ್ರಧಾನಮಂತ್ರಿಯವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್' ಎಂಬ ಮೂಲ ತತ್ವವು ಇಲ್ಲಿ ಪ್ರತಿಫಲಿಸುತ್ತದೆ. ಸಮಾಜದ ಎಲ್ಲ ವರ್ಗಗಳ ಜನರು ಒಟ್ಟಿಗೆ ಬಂದಿದ್ದಾರೆ ಮತ್ತು ಇದು ಹೆಮ್ಮೆಪಡಬೇಕಾದ ವಿಷಯ ಸಿಎಂ ಮೋಹನ್ ಯಾದವ್ ಹೇಳಿದ್ದಾರೆ ಕ್ಷಿಪ್ರಾ ನದಿಯ ದಡದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಗನ ವಿವಾಹ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಒಟ್ಟು 21 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ಸಾಮೂಹಿಕ ಸಮಾರಂಭ ಮುಗಿದ ನಂತರ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಸ್ವಾಗತ ಸಮಾರಂಭ ಕೂಡ ನಡೆಯಲಿದೆ. 11 ರಾಜ್ಯಗಳ ಸಚಿವರು, ಮುಖ್ಯಮಂತ್ರಿಗಳು, ಎಂಟು ರಾಜ್ಯಪಾಲರು ಮತ್ತು ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications