ಮಧ್ಯಪ್ರದೇಶ ಚುನಾವಣೆ; ಬಿಜೆಪಿ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳು

ಭೋಪಾಲ್, ನವೆಂಬರ್ 12: ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ, ಡಿಸೆಂಬರ್ 3ರಂದು ಫಲಿತಾಂಶ ಘೋಷಣೆಯಾಗಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಮುಂತಾದ ನಾಯಕರು ಶನಿವಾರ ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ 96 ಪುಟಗಳ 'ಸಂಕಲ್ಪ ಪತ್ರ' ಬಿಡುಗಡೆ ಮಾಡಿದರು. ಹಲವು ಭರವಸೆಗಳನ್ನು ಪಕ್ಷ ನೀಡಿದ್ದು, ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ.

madhya-pradesh-bjp-manifesto

ರಾಜ್ಯ ಬಿಜೆಪಿ ಅಧ್ಯಕ್ಷ ವಿ. ಡಿ. ಶರ್ಮಾ ಮಾತನಾಡಿ, "ಸಮಾಜದ ಎಲ್ಲಾ ವರ್ಗಗಳು, ಬುದ್ಧಿಜೀವಿಗಳ ಜೊತೆ ಚರ್ಚೆ ನಡೆಸಿ, ಸಲಹೆಗಳನ್ನು ಪಡೆದು ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಪ್ರಣಾಳಿಕೆ ರಚನೆ ಮಾಡಲಾಗಿದೆ. ಪ್ರಣಾಳಿಕೆ ಅಂಶಗಳನ್ನು ಜನರಿಗೆ ತಲುಪಿಸಲು ವಿಭಾಗೀಯ ಮಟ್ಟದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ" ಎಂದರು.

ಪ್ರಣಾಳಿಕೆ ಮುಖ್ಯ ಭರವಸೆಗಳು

* ಗೋಧಿಗೆ 2,700 ರೂ. ಮತ್ತು ಭತ್ತಕ್ಕೆ 3,100 ರೂ. ಕನಿಷ್ಠ ಬೆಂಬಲ ಬೆಲೆ ನೀಡುವುದು.

* ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿ ತನಕ ಉಚಿತ ಶಿಕ್ಷಣ

* ಲಾಡ್ಲಿ ಬೆಹನಾ ಮತ್ತು ಪಿಎಂ ಉಜ್ವಲಾ ಯೋಜನೆಯಡಿ ಫಲಾನುಭವಿಗಳಿಗೆ 450 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡುವುದು

* ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಅಥವ ಸ್ವಯಂ ಉದ್ಯೋಗಕ್ಕೆ ಸಹಕಾರ ನೀಡುವ ಭರವಸೆ

* ಐಐಟಿ ಮಾದರಿಯಲ್ಲಿ ತಾಂತ್ರಿಕ ಸಂಸ್ಥೆ ಮತ್ತು ಏಮ್ಸ್ ಮಾದರಿಯಲ್ಲಿ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪನೆ ಮಾಡುವುದು

* ರಸ್ತೆ ಅಭಿವೃದ್ಧಿಗೆ ಆದ್ಯತೆ ರಾಜ್ಯದಲ್ಲಿ ಹೊಸದಾಗಿ 6 ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಮಾತನಾಡಿ, "ರಾಜ್ಯದಲ್ಲಿ ಪಕ್ಷದ ಜನಾಶೀರ್ವಾದ ಯಾತ್ರೆಯ ವೇಳೆ 7 ಲಕ್ಷ ಸಲಹೆಗಳನ್ನು ಸ್ವೀಕಾರ ಮಾಡಲಾಗಿತ್ತು. ಇವುಗಳಲ್ಲಿನ ಅನೇಕ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕಾಗಿ 3 ಲಕ್ಷ ಕೋಟಿಗಳ ಅನುದಾನ ನೀಡಲಾಗುತ್ತದೆ" ಎಂದರು.

"ಕಾಂಗ್ರೆಸ್ ನರಕ ಚತುದರ್ಶಿ ಸಮಯದಲ್ಲಿ ಬಿಜೆಪಿ ಏಕೆ ಪ್ರಣಾಳಿಕೆ ಹೊರಗೆ ತರುತ್ತಿದೆ ಎಂದು ಆಶ್ಚರ್ಯಪಡುತ್ತಿದೆ. ಕಾಂಗ್ರೆಸ್‌ಗೆ ಪುರಾಣ, ಇತಿಹಾಸ ಗೊತ್ತಿಲ್ಲ. ಕೃಷ್ಣನು ನರಕಾಸುರನಿಂದ ಸಹೋದರಿಯರನ್ನು ಮುಕ್ತಗೊಳಿಸಿದ ದಿನ ಅದು" ಎಂದು ಹೇಳಿದರು.

96 ಪುಟಗಳ 'ಸಂಕಲ್ಪ ಪತ್ರ' ಬಿಡುಗಡೆ ಬಳಿಕ ಜೆಪಿ ನಡ್ಡಾ ಮಾತನಾಡಿ, "ಪ್ರಣಾಳಿಕೆಯಲ್ಲಿನ ಅಂಶಗಳನ್ನು ಅಕ್ಷರಶಃ ಜಾರಿಗೆ ತಂದ ಏಕೈಕ ಪಕ್ಷ ಬಿಜೆಪಿ. ಪಕ್ಷವು ತನ್ನ ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಪ್ರಣಾಳಿಕೆ ಹೇಗೆ ಜಾರಿಗೆ ಬರುತ್ತದೆ ಎಂದು ಕಣ್ಗಾವಲು ಇಡುತ್ತದೆ" ಎಂದು ತಿಳಿಸಿದರು.

ಈ ಬಾರಿಯ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೆ ಜನರ ಮುಂದೆ ಹೋಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ವಿರುದ್ಧ ಅಸಮಾಧಾನ ತೀವ್ರವಾಗಿದೆ ಎಂಬ ಸುದ್ದಿ ಹಬ್ಬಿದೆ. ರಾಜ್ಯ ವಿಧಾನಸಭಾ ಚುನಾವಣಾ ಕಣಕ್ಕೆ ಕೇಂದ್ರ ಸಚಿವರು, ಸಂಸದರನ್ನು ಕಣಕ್ಕಿಳಿಸಿ ಪಕ್ಷ ಅಚ್ಚರಿಯನ್ನು ಮೂಡಿಸಿದೆ.

ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್‌ ಬಿಜೆಪಿಗೆ ರಾಜ್ಯದಲ್ಲಿ ನೇರ ಎದುರಾಳಿ. 2018ರ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದರು. ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದ ಬಳಿಕ ಅವರ ಬೆಂಬಲಿಗ ಶಾಸಕರು ಪಕ್ಷ ತೊರೆದರು. ಆಗ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+