ಉತ್ತರಪ್ರದೇಶದಲ್ಲಿ 230 ದಲಿತ ಕುಟುಂಬಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ: ವ್ಯಕ್ತಿ ಬಂಧನ
ಲಕ್ನೋ, ಜುಲೈ. 17: ಯಾವುದೇ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಮನೆಯ ಸದಸ್ಯರನ್ನು ಗುಣಪಡಿಸುವುದಾಗಿ ಭರವಸೆ ನೀಡಿ 230 ದಲಿತ ಕುಟುಂಬಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಲಕ್ನೋದ ಕ್ರಿಶ್ಚಿಯನ್ನರಾದ ಆರೋಪಿ ಬಜರಂಗ್ ರಾವತ್ ಕಳೆದ ಒಂದು ವರ್ಷದಿಂದ ಇತ್ತರ ಪ್ರದೇಶದ ಲೋನಿಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರ ನಿವಾಸದಿಂದ ಬೈಬಲ್ ಮತ್ತು ಇತರ ಕ್ರಿಶ್ಚಿಯನ್ ಪುಸ್ತಕಗಳ ಕೆಲವು ಪ್ರತಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅಖಿಲೇಶ್ ನಾರಾಯಣ್ ಸಿಂಗ್ ಹೇಳಿದ್ದಾರೆ.

ಹೈದರ್‌ಗಢ್ ಪಟ್ಟಣದ ವಿಜಯ್ ಹಿಂದೂಸ್ತಾನಿ ಎಂಬುವವರ ನೀಡಿದ ದೂರಿನ ಆಧಾರದ ಮೇಲೆ, ಬಜರಂಗ್ ರಾವತ್ ವಿರುದ್ಧ ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮದ ಮತಾಂತರ ನಿಷೇಧ ಕಾಯಿದೆ, 2021 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇವರ ಜೊತೆಗೆ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಇತರ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತ ವಿಜಯ್ ಹಿಂದೂಸ್ತಾನಿ ಇತರ ಕಾರ್ಯಕರ್ತರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ, ಆ ಪ್ರದೇಶದ ಅನೇಕ ಹಿಂದೂ ಮಹಿಳೆಯರನ್ನು ಅವರು ಕಂಡಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಬಜರಂಗ್ ರಾವತ್ ಅವರು ತಮ್ಮ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಪ್ರದೇಶದ ಬಡ ಜನರನ್ನು ಕರೆಸುತ್ತಿದ್ದರು ಮತ್ತು ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಆಮಿಷ ಒಡ್ಡುತ್ತಿದ್ದರು ಎಂದಿದ್ದಾರೆ.

ಆರೋಪಿಗಳು ನೀಡಿದ ಚಿಕಿತ್ಸೆಯಿಂದ ನಮಗೆ ಲಾಭವಾಗಿದೆ ಮತ್ತು ಇನ್ನು ಮುಂದೆ ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಈ 230 ದಲಿತ ಕುಟುಂಬಗಳಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಬಜರಂಗ್ ರಾವತ್ ಮತ್ತು ಅವರ ಕುಟುಂಬ ಪ್ರಭಾವ ಬೀರಿದೆ ಎಂದು ವಿಜಯ್ ಹಿಂದೂಸ್ತಾನಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬಜರಂಗ್ ರಾವತ್ ಅವರು ದಲಿತ ಕುಟುಂಬಗಳನ್ನು ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ಜಲಂಧರ್‌ಗೆ ಕರೆದೊಯ್ದು ಅಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುತ್ತಿದ್ದರು ಎಂದು ಹಿಂದೂ ಕಾರ್ಯಕರ್ತ ಆರೋಪಿಸಿದ್ದಾರೆ.












Click it and Unblock the Notifications