ಜೀವನ ದೀರ್ಘವಾಗಲ್ಲ, ದೊಡ್ಡದಾಗಿರಬೇಕು: ಹುತಾತ್ಮ ಯೋಧನ ಮನದ ಮಾತು!
ಜಮ್ಮು, ಫೆಬ್ರವರಿ 05: "ಜೀವನ ದೀರ್ಘವಾಗಿರದಿದ್ದರೂ ಪರವಾಗಿಲ್ಲ, ದೊಡ್ಡದಾಗಿರಬೇಕು" ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಮೃತರಾದ ಭಾರತೀಯ ಸೈನಿಕ ಕ್ಯಾ.ಕಪಿಲ್ ಕುಂಡು ಅವರ ಫೇಸ್ ಬುಕ್ ಪುಟದಲ್ಲಿ ಕಂಡ ಸಾಲು ಇದು. ಅವರ ಬದುಕೂ ಹಾಗೇ ಆಯ್ತು. ಆಯುಷ್ಯ ಹೆಚ್ಚು ದಿನ ಇರಲಿಲ್ಲ! ಆದರೆ ಅಷ್ಟೇ ದಿನಗಳಲ್ಲಿ ತಮ್ಮದು ದೊಡ್ಡ ಜೀವನ ಎಂಬುದನ್ನು ಸಾಬೀತು ಪಡಿಸಿಹೋಗಿದ್ದಾರೆ ಕಪಿಲ್ ಕುಂಡು.
ತಮ್ಮ ಕೆ ಕೆ ಎಂಬ ಫೇಸ್ ಬುಕ್ ಖಾತೆಯಲ್ಲಿ ಅವರು ಬರೆದ ಆ ಸಾಲು, 'ಎಷ್ಟು ದಿನ ಬದುಕುತ್ತೀವಿ ಎಂಬುದು ಮುಖ್ಯವಲ್ಲ, ನಾಲ್ಕೇ ದಿನವಾದರೂ ಎಷ್ಟು ಸಾರ್ಥಕವಾಗಿ ಬದುಕುತ್ತೀವಿ ಎಂಬುದು ಮುಖ್ಯ' ಎಂಬುದನ್ನು ಸಾಬೀತುಪಡಿಸಿದೆ.
ಫೆಬ್ರವರಿ 10 ರಂದು ತಮ್ಮ 23 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದ ಕುಂಡು, ಪಾಕಿಸ್ತಾನದ ಹೇಯಕೃತ್ಯಕ್ಕೆ ಇಹಲೋಕತ್ಯಜಿಸಿದ್ದಾರೆ. ಗುರ್ಗಾಂವಿನ ರನ್ಸಿಕಾ ಎಂಬ ಹಳ್ಳಿಯಲ್ಲಿ ಜನಿಸಿದ ಕುಂಡು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಸದಾ ತುಡಿಯುತ್ತಿದ್ದರು. ತಮ್ಮ ಆಸೆಯಂತೆಯೇ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಪಾಕ್ ಸೈನಿಕರ ಹೇಡಿತನದಿಂದ ಹುತಾತ್ಮರಾಗಿದ್ದಾರೆ.

ಫೆ.4 ರಂದು ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಭಾರತೀಯ ಸೇನೆಯ ಮೇಲೆ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.












Click it and Unblock the Notifications