Lalu Prasad Yadav: ಹಿರಿಯ ಮಗನನ್ನು ಪಕ್ಷದಿಂದಲೇ ಉಚ್ಛಾಟಿಸಿದ ಲಾಲು ಪ್ರಸಾದ್ ಯಾದವ್
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭಾನುವಾರ ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದ್ದಾರೆ. ತೇಜ್ ಪ್ರತಾಪ್ ಯಾದವ್ ಅವರ ಬೇಜವಾಬ್ದಾರಿಯುತ ನಡವಳಿಕೆಯಿಂದಾಗಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.
ತೇಜ್ ಪ್ರತಾಪ್ ಯಾದವ್ ಅವರ ಒಂದು ಫೇಸ್‌ಬುಕ್ ಪೋಸ್ಟ್ ಅವರನ್ನು ಪಕ್ಷದಿಂದ ಹೊರಹಾಕಿದೆ. ಅನುಷ್ಕಾ ಯಾದವ್ ಅವರೊಂದಿಗಿನ ಅವರ ದೀರ್ಘಕಾಲದ ಸಂಬಂಧದ ಬಗ್ಗೆ ಮಾತನಾಡಿರುವ ಅವರು ಕಳೆದ 12 ವರ್ಷಗಳಿಂದ ಪ್ರೀತಿಸುತ್ತಿದ್ದು ಸಂಬಂಧದಲ್ಲಿದ್ದಾರೆ ಎಂದು ಹೇಳಿದ್ದಾರೆ. ಪೋಸ್ಟ್ ಮಾಡಿದ ಬಳಿಕ ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅವರ ಮತ್ತು ಅವರ ಕುಟುಂಬವನ್ನು ಕೆಣಕಲು ಫೋಟೋಗಳನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಿದ್ದರು.

ತೇಜ್ ಪ್ರತಾಪ್ ವಿರುದ್ಧ ಕಿಡಿ
ತೇಜ್ ಪ್ರತಾಪ್ ಅವರ ಫೇಸ್‌ಬುಕ್ ಪೋಸ್ಟ್‌ನಿಂದ ಸಿಟ್ಟಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಗನನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಹೇಳಿದ್ದಾರೆ. ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದು ಸಾಮಾಜಿಕ ನ್ಯಾಯಕ್ಕಾಗಿ ಪಕ್ಷದ ಸಾಮೂಹಿಕ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿರುವ ಅವರು, ತೇಜ್ ಪ್ರತಾಪ್ ಅವರ ನಡವಳಿಕೆ ಕುಟುಂಬ ಮೌಲ್ಯಗಳು ಅಥವಾ ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ ಎಂದಿದ್ದಾರೆ.
"ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟ ದುರ್ಬಲಗೊಳ್ಳುತ್ತದೆ. ಹಿರಿಯ ಮಗನ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿಯುತ ನಡವಳಿಕೆಯು ನಮ್ಮ ಕುಟುಂಬ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ, ನಾನು ಅವರನ್ನು ಪಕ್ಷ ಮತ್ತು ಕುಟುಂಬದಿಂದ ತೆಗೆದುಹಾಕುತ್ತಿದ್ದೇನೆ. ಇಂದಿನಿಂದ, ಅವರಿಗೆ ಪಕ್ಷ ಮತ್ತು ಕುಟುಂಬದಲ್ಲಿ ಯಾವುದೇ ರೀತಿಯ ಪಾತ್ರವಿರುವುದಿಲ್ಲ. ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ" ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಲಾಲು ಯಾದವ್ ಅವರ ಕಿರಿಯ ಮಗ ಮತ್ತು ತೇಜ್ ಪ್ರತಾಪ್ ಅವರ ಸಹೋದರ ತೇಜಸ್ವಿ ಯಾದವ್ ಭಾನುವಾರ ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, "ನಾನು ಇದನ್ನೆಲ್ಲಾ ಇಷ್ಟಪಡುವುದಿಲ್ಲ ಅಥವಾ ಸಹಿಸುವುದಿಲ್ಲ. ವೈಯಕ್ತಿಕ ಜೀವನವು ಪ್ರತ್ಯೇಕವಾಗಿರಬೇಕು. ಅವರು ಹಿರಿಯರು, ಮತ್ತು ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ. ಆದರೆ ಲಾಲು ಪ್ರಸಾದ್ ಯಾದವ್ ಟ್ವೀಟ್ ಮೂಲಕ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ. ಅವರು ಸರಿ ಎಂದು ಭಾವಿಸಿದ್ದನ್ನು ಮಾಡಿದರು. ಇದರ ಬಗ್ಗೆ ನನಗೆ ಮಾಧ್ಯಮಗಳ ಮೂಲಕ ಮಾತ್ರ ತಿಳಿದುಬಂದಿತು" ಎಂದಿದ್ದಾರೆ.
ನಿತೀಶ್ ಕುಮಾರ್ ಅವರ ಜನತಾದಳ (ಯುನೈಟೆಡ್) ಲಾಲು ಪ್ರಸಾದ್ ಯಾದವ್ ಅವರನ್ನು ಟೀಕಿಸಿ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆರ್‌ಜೆಡಿ ಕಣ್ಣೊರೆಸುವ ನಾಟವಾಡುತ್ತಿದೆ ಎಂದು ಹೇಳೀದ್ದಾರೆ.
ವಿವಾದಕ್ಕೆ ಕಾರಣವಾದ ಪೋಸ್ಟ್
ಶನಿವಾರ ತೇಜ್ ಪ್ರತಾಪ್ ಮಾಡಿದ ಪೋಸ್ಟ್ ವಿವಾದಕ್ಕೆ ಕಾರಣವಾಗಿತ್ತು, ತೇಜ್ ಪ್ರತಾಪ್ ಅವರ ಧೈರ್ಯವನ್ನು ಅನೇಕ ಜನರು ಶ್ಲಾಘಿಸಿದರೆ, ಕೆಲವು ನೆಟಿಜನ್‌ಗಳು ಈ ಸಂಬಂಧವು ಈಗ ಮದುವೆಗೆ ಕಾರಣವಾಗುತ್ತದೆಯೇ ಎಂದು ತಿಳಿಯಲು ಕುತೂಹಲ ಹೊಂದಿದ್ದರು.












Click it and Unblock the Notifications