KFC in Ayodhya: ಅಯೋಧ್ಯೆಯಲ್ಲಿ ಕೆಎಫ್‌ಸಿ ಮಳಿಗೆ: ಎಲ್ಲೆಲ್ಲಿ ಮಾರಾಟಕ್ಕೆ ಅವಕಾಶವಿದೆ ತಿಳಿಯಿರಿ
ಅಯೋಧ್ಯೆ ಫೆಬ್ರವರಿ 8: ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಗೊಂಡಿದೆ. ನಿತ್ಯ ಸಾವಿರಾರು ಜನ ಶ್ರೀರಾಮನ ಜನ್ಮ ಭೂಮಿಯಲ್ಲಿ ರಾಮಮಂದಿರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸದ್ಯ ಅಯೋಧ್ಯೆ ಪ್ರವಾಸಿಗರ ಪ್ರಮುಖ ವೀಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಈ ನಡುವೆ ಅಯೋಧ್ಯೆಯಲ್ಲಿ ಕೆಂಟುಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ಮಳಿಗೆಗಳನ್ನು ತೆರೆಯಲಾಗಿದೆ. ಇದಕ್ಕೆ ಜಿಲ್ಲಾಡಳಿತ ಕೂಡ ಒಪ್ಪಿಗೆ ಸೂಚಿಸಿದೆ.
ಹೌದು... ಅಯೋಧ್ಯೆ ಭವ್ಯವಾದ ರಾಮಜನ್ಮಭೂಮಿ ಮಂದಿರದ ತವರು. ಇಲ್ಲಿ ಕೆಂಟುಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗಿದೆ. ಆದರೆ ಮಾಂಸಾಹಾರಿ ಪದಾರ್ಥಗಳನ್ನು ಮಾರಾಟ ಮಾಡಲು ಇಲ್ಲಿ ಅಂದರೆ ರಾಮ ಮಂದಿರ ಸುತ್ತಮುತ್ತಲ ಪ್ರದೇಶದಲ್ಲಿ ಅನುಮತಿಸುವುದಿಲ್ಲ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಯೋಧ್ಯೆಯಿಂದ 15 ಕಿಲೋಮೀಟರ್ ದೂರದಲ್ಲಿ ಮಾಂಸಾಹಾರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಹೇಳಿಕೆಯಲ್ಲಿ, ಅಮೆರಿಕದ ಫಾಸ್ಟ್ ಫುಡ್ ಕೆಎಫ್‌ಸಿ ಪಟ್ಟಣದಲ್ಲಿ ತನ್ನ ಮಳಿಗೆಗಳನ್ನು ತೆರೆದಿರುವುದು ಸ್ವಾಗತಾರ್ಹ. ಆದರೆ ಮಾಂಸ, ಮೀನು ಮತ್ತು ಇತರ ಮಾಂಸಾಹಾರಿ ವಸ್ತುಗಳ ಮಾರಾಟ ನಿರ್ಬಂಧಿತ ವಲಯದಲ್ಲಿ ಮಾತ್ರ ಮಾಡುವಂತಿಲ್ಲ. ಇದರ ಮಾರಾಟ ಹಾಗೂ ಸೇವನೆಯನ್ನು ನಿರ್ಬಂಧವಿಲ್ಲದ ಸ್ಥಳದಲ್ಲೇ ಮಾಡಬೇಕು ಎಂದು ಹೇಳಿದರು. ಜೊತೆಗೆ ದೇವಸ್ಥಾನದ ಸುತ್ತಮುತ್ತಲಿನ ಸ್ಥಳದಲ್ಲಿ ಸಸ್ಯಾಹಾರಿ ಆಹಾರವನ್ನು ಮಾರಾಟ ಮಾಡಬಹುದು ಎಂದು ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಕಳೆದ ತಿಂಗಳು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಮಾಂಸಾಹಾರದ ಮೇಲೆ ನಿಷೇಧ ಹೇರಿತ್ತು. ಆದರೀಗ ವಿಶ್ವವಿಖ್ಯಾತ ಫ್ರೈಡ್ ಚಿಕನ್‌ಗೆ ಹೆಸರುವಾಸಿಯಾಗಿರುವ ಕೆಎಫ್‌ಸಿ, ನಿರ್ಬಂಧಿತ ವಲಯದಿಂದ ಹೊರ ಪ್ರದೇಶದಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಹುದು ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.
"ಕೆಎಫ್‌ಸಿ ಮತ್ತು ಇತರ ಎಲ್ಲರಿಗೂ ಅಯೋಧ್ಯೆಯಲ್ಲಿ ತಮ್ಮ ಮಳಿಗೆಗಳನ್ನು ತೆರೆಯಲು ಸ್ವಾಗತವಿದೆ. ಆದರೆ ಅವರು ಮಾಂಸಾಹಾರಿ ಉತ್ಪನ್ನಗಳು, ಮದ್ಯದ ಮಾರಾಟ ಮತ್ತು ಸೇವನೆಯ ಮೇಲೆ ನಿಷೇಧವಿರುವ ನಿರ್ಬಂಧಿತ ವಲಯದಲ್ಲಿ ತಮ್ಮ ಮಳಿಗೆಗಳನ್ನು ಸ್ಥಾಪಿಸುವಂತಿಲ್ಲ. ಅವರು ಈ ಸ್ಥಳಗಳಲ್ಲಿ ಸಸ್ಯಾಹಾರಿ ಆಹಾರ ಮಾತ್ರ ಮಾರಾಟ ಮಾಡಬಹುದು. ರಾಮ ಮಂದಿರ ದೇವಾಲಯದದಿಂದ 15 ಕಿಲೋಮೀಟರ್ ದೂರದ ವಲಯದಲ್ಲಿ ಮಾಂಸಾಹಾರ, ಮದ್ಯ ಮಾರಾಟ ಹಾಗೂ ಸೇವನೆ ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧ ಅನ್ವಯಿಸುವುದಿಲ್ಲ" ಎಂದು ಕುಮಾರ್ ಹೇಳಿದರು.

ಇದನ್ನು ಹೊರತುಪಡಿಸಿ ಅಯೋಧ್ಯೆಯ ಉಳಿದ ಪ್ರದೇಶದಲ್ಲಿ ಬೇರೆ ಯಾವುದೇ ಮಳಿಗೆಗಳಿಗೆ ನಿರ್ಬಂಧವಿಲ್ಲ ಎಂದು ಅವರು ಹೇಳಿದರು. ಹೀಗಾಗಿ ರಾಮ ಮಂದಿರದ ಸುತ್ತಲಿನ 15 ಕಿಮೀ ಪ್ರದೇಶದಲ್ಲಿ ಅಯೋಧ್ಯಾ ಆಡಳಿತ ಮಾಂಸಾಹಾರಿ ಉತ್ಪನ್ನಗಳ ಮಾರಾಟ ಅಥವಾ ಖರೀದಿಯನ್ನು ನಿಷೇಧಿಸಿದೆ. ಈ ಪ್ರದೇಶದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಹ ನಿಷೇಧಿಸಲಾಗಿದೆ.
ಜನವರಿ 22 ರಂದು ರಾಮ್ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದ ನಂತರ ರಾಮ ಮಂದಿರದ ಒಳಗೆ ಪ್ರವೇಶಿಸಲು ಸಾರ್ವಜನಿಕರಿಗೆ ಅನುಮತಿಸಲಾಗಿದೆ. ಹೀಗಾಗಿ ಅಯೋಧ್ಯೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಏಕಾಏಕಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವಾಲಯದ ಬಳಿ ವಿವಿಧ ತಿನಿಸುಗಳು ಮತ್ತು ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲಾಗಿದೆ.
ರಾಮಮಂದಿರ 'ಪ್ರಾಣ ಪ್ರತಿಷ್ಠಾ'
ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವು ಜನವರಿ 22 ರಂದು ಅದ್ದೂರಿಯಾಗಿ ನಡೆಯಿತು. ಭವ್ಯ ಮಂದಿರದ ಗರ್ಭಗುಡಿಯಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ರಾಮಲಲ್ಲಾ ವಿಗ್ರಹವನ್ನು ಅನಾವರಣಗೊಳಿಸಲಾಯಿತು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೂಜಾ ವಿಧಿವಿಧಾನದ ವೇಳೆ ಗರ್ಭಗುಡಿಯೊಳಗೆ ಉಪಸ್ಥಿತರಿದ್ದರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು ಭಕ್ತರನ್ನು ನಿರ್ವಹಣೆ ಕಷ್ಟವಾಗುತ್ತಿದೆ. ಅಯೋಧ್ಯೆಗೆ ಅನೇಕ ವಿಶೇಷ ರೈಲುಗಳು ಪ್ರಾರಂಭವಾಗಿವೆ.












Click it and Unblock the Notifications