ರಾಹುಲ್ ವಿರುದ್ಧ ಪೋಸ್ಟ್: ಅಮಿತ್ ಮಾಳವೀಯಾ ವಿರುದ್ಧದ ತನಿಖೆಗೆ ತಡೆ
ಬೆಂಗಳೂರು, ಜುಲೈ 20; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ಪೋಸ್ಟ್ ಮಾಡಿದ್ದ ಬಿಜೆಪಿ ಸಾಮಾಜಿಕ ಜಾಲಾತಾಣ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ ಹಾಕಿದೆ. ಅಮಿತ್ ಮಾಳವೀಯ ಪರ ಸಂಸದ ತೇಜಸ್ವಿ ಸೂರ್ಯ ವಾದ ಮಂಡಿಸಿದರು.
ಅಮಿತ್ ಮಾಳವೀಯ ಸದ್ಯ ತನಿಖೆ ಎದುರಿಸಬೇಕಾಗಿಲ್ಲ. ಸ್ವಲ್ಪ ನಿರಾಳವಾಗಬಹುದಾಗಿದೆ. ಏಕೆಂದರೆ ಅವರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಅಮಿತ್ ಮಾಳವೀಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಮಧ್ಯಂತರ ಆದೇಶ ನೀಡಿದೆ.

ಅರ್ಜಿದಾರರ ಹೇಳಿಕೆಯಿಂದ ಯಾವುದೇ ರೀತಿಯಲ್ಲಿಯೂ ಸಮಾಜದಲ್ಲಿ ಗೊಂದಲವನ್ನುಂಟು ಮಾಡುವಂತಹ ಅಂಶ ಇಲ್ಲ. ಹೀಗಾಗಿ ಪ್ರಕರಣದ ವಿಚಾರಣೆ ಮುಂದುವರೆದಲ್ಲಿ ಕಾನೂನಿನ ದುರ್ಬಳಕೆ ಮಾಡಿಕೊಂಡಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟು ತನಿಖೆಗೆ ತಡೆ ನೀಡಿ ಆದೇಶಿಸಿದೆ. ಅಲ್ಲದೆ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ಸಂಸದ, ವಕೀಲ ತೇಜಸ್ವಿ ಸೂರ್ಯ ವಾದ: ಅಮಿತ್ ಮಾಳವೀಯ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ವಕೀಲ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಇಡೀ ದೂರಿನಲ್ಲಿ ಐಪಿಸಿ 153 (ಎ)ನ್ನು ಸೇರಿಸಲಾಗಿದೆ. ಆದರೆ, ಅವರ ದೂರಿನ ಇಡೀ ಸಾರಾಂಶವನ್ನು ಪರಿಶೀಲಿಸಿದಲ್ಲಿ ಧರ್ಮ, ವಾಸ ಸ್ಥಳ, ಮತ್ತು ಭಾಷೆಯ ಆಧಾರದಲ್ಲಿ ಎರಡು ವರ್ಗಗಳ ಗೊಂದಲ ಸೃಷ್ಠಿಸುವಂತಹ ಅಂಶಗಳಿಲ್ಲ. ಹೀಗಾಗಿ ಪ್ರಕರಣಕ್ಕೆ ರದ್ದು ಪಡಿಸಬೇಕು ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಬೆಳ್ಳಿಯಪ್ಪ, ತನಿಖೆ ನಡೆದು ವರದಿ ಸಲ್ಲಿಸಲಿ ಅಲ್ಲಿಯವರೆಗೂ ಪ್ರಕರಣದ ವಿಚಾರಣೆ ನಡೆಯಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಿ ಎಂದು ತಿಳಿಸಿತು. ಅರ್ಜಿಯ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.
ಪ್ರಕರಣದ ಹಿನ್ನೆಲೆ: ಜೂನ್ 17ರಂದು ಅಮಿತ್ ಮಾಳವೀಯಾ ಅವರು ಟ್ವೀಟ್ ಮಾಡಿ, ಅನಿಮೇಷನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅಲ್ಲದೆ, ರಾಹುಲ್ ಗಾಂಧಿ ಅವರು ವಿದೇಶದಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ದೇಶವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಲ್ಲದೇ, ಇಸ್ಲಾಮಿಕ್ ನಂಬಕೆ ಜನರೊಂದಿಗೆ ರಾಹುಲ್ ಗಾಂಧಿ ಅವರ ನಡೆಸಿದ ಸಂವಾದವನ್ನು ಅನಿಮೇಷನ್ ಮೂಲಕ ತಪ್ಪಾಗಿ ನಿರೂಪಿಸಿದ್ದು ಇದು ಜನರ ನಡುವೆ ದ್ವೇಷವನ್ನು ಉಂಟು ಮಾಡುವ ಸಾಧ್ಯತೆಯಿದ್ದು, ಕೋಮು ಸೌಹಾಧತೆಗೆ ಧಕ್ಕೆ ತರಲಿದೆ. ಜತೆಗೆ, ಈ ಅಂಶ ಸಮಾಜವನ್ನು ಪ್ರಚೋಧನೆಗೊಳಿಸಲಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ರೀತಿಯ ಟ್ವೀಟ್ ಮಾಡಿರುವ ಅಮಿತ್ ಮಾಳವೀಯಾ ವಿರುದ್ಧ ಐಪಿಸಿ 153ಎ( ವಿವಿಧ ಗುಂಪುಗಳ ನಡುವೆ ಜನ್ಮ ಸ್ಥಳ, ಧರ್ಮ, ಭಾಷೆಯ ಆಧಾರದಲ್ಲಿ ದ್ವೇಷವನ್ನುಂಟು ಮಾಡಿ ಶಾಂತಿ ಸೌಹಾರ್ಧತೆಗೆ ಧಕ್ಕೆ ತರುವುದು. 120ಬಿ (ಅಪರಾಧಿಕ ಒಳಸಂಚಿಗೆ ಶಿಕ್ಷೆ) 505(ಸಾರ್ವಜನಿಕವಾಗಿ ಕೇಡುಂಟು ಮಾಡುವುದು) ಆರೋಪಗಳ ಅಡಿಯಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ 2023ರ ಜೂನ್ 17ರಂದು ರಮೇಶ್ ಬಾಬು ಕೋರಿದ್ದರು. ಈ ಪ್ರಕರಣ ರದ್ದುಕೋರಿ ಅಮಿತ್ ಮಾಳವೀಯಾ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications