ಹೈಕೋರ್ಟ್ ಜಡ್ಜ್ ರಾಜೀನಾಮೆ, ಬಿಜೆಪಿ ಸೇರುವ ಘೋಷಣೆ!
ನವದೆಹಲಿ, ಮಾರ್ಚ್ 05: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧೆ ಮಾಡಲು ಪೈಪೋಟಿ ಜೋರಾಗಿದೆ. ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಗೂ ಮೊದಲೇ ನ್ಯಾಯಮೂರ್ತಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾದ ಅಭಿಜಿತ್ ಗಂಗೋಪಾಧ್ಯಾಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಗುರುವಾರ ಬಿಜೆಪಿ ಸೇರುತ್ತೇನೆ ಎಂದು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಘೋಷಣೆ ಮಾಡಿದ್ದಾರೆ. ಅಭಿಜಿತ್ ಗಂಗೋಪಾಧ್ಯಾಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀಡಿದ್ದ ತೀರ್ಪುಗಳು ಚರ್ಚೆಗೆ ಕಾರಣವಾಗಿದ್ದವು.
ಮಾರ್ಚ್ 4ರಂದು ರಾಜೀನಾಮೆ ನೀಡುತ್ತೇನೆ ಎಂದು ಅಭಿಜಿತ್ ಗಂಗೋಪಾಧ್ಯಾಯ ಈ ಹಿಂದೆಯೇ ಘೋಷಣೆ ಮಾಡಿದ್ದರು. ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ಗುರುವಾರ ಸಂಜೆ ಬಿಜೆಪಿ ಸೇರಲಿದ್ದಾರೆ.
ರಾಜೀನಾಮೆ ಸಲ್ಲಿಕೆ: ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಈಗಾಗಲೇ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿರುವ ಪತ್ರವನ್ನು ಸಲ್ಲಿಸಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಶಿವಾಗ್ನಂ ಭೇಟಿಯಾಗಲಿದ್ದಾರೆ.
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ, "ಸಮಾಜದಲ್ಲಿರುವ ದುರ್ಬಲ ವರ್ಗದವರಿಗೆ ಸಹಾಯ ಮಾಡಲು ರಾಜಕಾರಣ ಸರಿಯಾದ ಮಾರ್ಗ. ಕಳೆದ ಎರಡು ವರ್ಷಗಳಲ್ಲಿ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ನೋಡಿದ್ದೇನೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ" ಎಂದು ಹೇಳಿದ್ದಾರೆ.
ಈ ವರ್ಷ ಅಂತ್ಯದಲ್ಲಿ ನಿವೃತ್ತರಾಗಲಿದ್ದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವಧಿಗೂ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ನಾನು ಈಗ ಬಹುಸಂಖ್ಯಾತ ಜನರ ಜೊತೆ ಹೋಗುತ್ತೇನೆ" ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 42 ಲೋಕಸಭಾ ಕ್ಷೇತ್ರಗಳಿವೆ. ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ತುಮ್‌ಲುಕ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ಚುನಾವಣಾ ಕಣಕ್ಕಿಳಿಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಯಲ್ಲಿನ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ನಡೆದ ವಿವಿಧ ಹಗರಣಗಳ ತನಿಖೆಗೆ ಸಿಬಿಐ ಮತ್ತು ಇಡಿಗೆ ಹಲವು ನಿರ್ದೇಶನಗಳನ್ನು ನೀಡಿ ತೀರ್ಪು ನೀಡುವ ಮೂಲಕ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಸುದ್ದಿಯಾಗಿದ್ದರು.
2023ರ ಏಪ್ರಿಲ್‌ನಲ್ಲಿ ತಾನು ವಿಚಾರಣೆ ನಡೆಸುತ್ತಿದ್ದ ಪ್ರಕರಣವೊಂದರ ವಿಚಾರದಲ್ಲಿ ಲಂಚ ನೀಡಲು ಬಂದಿದ್ದಾರೆ ಎಂದು ಮಾತನಾಡಿ ಅಭಿಜಿತ್ ಗಂಗೋಪಾಧ್ಯಾಯ ಸುದ್ದಿಯಾಗಿದ್ದರು.
ಅಭಿಜಿತ್ ಗಂಗೋಪಾಧ್ಯಾಯ ಸ್ಪರ್ಧಿಸಲು ಬಯಸಿರುವ ತುಮ್ಲಕ್ ಕ್ಷೇತ್ರದಿಂದ ಟಿಎಂಸಿಯ ಭದ್ರಕೋಟೆ. 2009ರಿಂದಲೂ ಟಿಎಂಸಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗೆಲ್ಲುತ್ತಿದ್ದಾರೆ. 2009 ಮತ್ತು 2016ರಲ್ಲಿ ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಸುವೇಂದು ಅಧಿಕಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರದಲ್ಲಿ ಪಶ್ಚಿಮ ಬಂಗಾಳದಲ್ಲಿ 42 ಕ್ಷೇತ್ರಗಳ ಪೈಕಿ 12 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
2019ರ ಚುನಾವಣೆಯಲ್ಲಿ ಟಿಎಂಸಿ ರಾಜ್ಯದಲ್ಲಿ 22 ಸೀಟು, ಬಿಜೆಪಿ 18, ಕಾಂಗ್ರೆಸ್ 2 ಸೀಟು ಗೆದ್ದಿದ್ದವು. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 20 ಸೀಟು, ಟಿಎಂಸಿ 21 ಸೀಟುಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿವೆ. ಬಿಜೆಪಿ ಮುಂದಿನ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅಭಿಜಿತ್ ಗಂಗೋಪಾಧ್ಯಾಯ ಅಭ್ಯರ್ಥಿ ಎಂದು ಘೋಷಣೆ ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications