Jharkhand Election: ಜಾರ್ಖಂಡ್ ಚುನಾವಣೆ; ಗಮನ ಸೆಳೆದಿರುವ ಅಭ್ಯರ್ಥಿಗಳು, ಕ್ಷೇತ್ರಗಳ ವಿವರ
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. 81 ಕ್ಷೇತ್ರಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 13ರಂದು ಬುಧವಾರದಂದು 43 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 685 ಅಭ್ಯರ್ಥಿಗಳು ಕಣದಲ್ಲಿದ್ದು, ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಲಿದೆ.
ಎನ್‌ಡಿಎ ಮತ್ತು ಇಂಡಿಯಾ ಬ್ಲಾಕ್ ನಡುವೆ ಜಿದ್ದಾ ಜಿದ್ದಿನ ಹೋರಾಟ ನಿರೀಕ್ಷೆ ಮಾಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ಜೆಮ್‌ಶೆಡ್‌ಪುರ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜಗನ್ನಾಥಪುರ ಕ್ಷೇತ್ರದಲ್ಲಿ ಕೇವಲ 8 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು, ಅತಿ ಕಡಿಮೆ ಅಭ್ಯರ್ಥಿಗಳಿರುವ ಕ್ಷೇತ್ರ ಎನಿಸಿಕೊಂಡಿದೆ.
ರಾಷ್ಟ್ರೀಯ ನಾಯಕರ ಭರ್ಜರಿ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಎರಡು ವಾರಗಳಲ್ಲಿ ಎರಡು ಬಾರಿ ಸಮಾವೇಶ ಮತ್ತು ರೋಡ್ ಶೋ ನಡೆಸಿದ್ದು ಮತದಾರರನ್ನು ಸೆಳೆಯಲು ಎಲ್ಲಾ ಪ್ರಯತ್ನ ಮಾಡಿದ್ದಾರೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ಶಾಸಕಿ ಪತ್ನಿ ಕಲ್ಪನಾ ಪ್ರಚಾರ ನಡೆಸಿದ್ದು ಜೆಎಂಎಂ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಇಂಡಿಯಾ ಒಕ್ಕೂಟದ ಪರವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಕೂಡ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದರು.
ಮತದಾರರ ಮಾಹಿತಿ
ಜಾರ್ಖಂಡ್‌ನಲ್ಲಿ ಈ ಬಾರಿ ಒಟ್ಟು 2.6 ಕೋಟಿ ಮತದಾರರು ಮತ ಹಾಕಲು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 1.31 ಕೋಟಿ ಪುರುಷರು ಮತ್ತು 1.29 ಕೋಟಿ ಮಹಿಳಾ ಮತದಾರರಿದ್ದಾರೆ. 20 ರಿಂದ 29 ವರ್ಷದೊಳಗಿನ ಮತದಾರರ ಸಂಖ್ಯೆ 66.84 ಲಕ್ಷ, 18 ಮತ್ತು 19 ವರ್ಷ ವಯಸ್ಸಿನ 11.84 ಲಕ್ಷ ಮತದಾರರಿದ್ದು, ಮೊದಲ ಬಾರಿ ಹಕ್ಕು ಚಲಾಯಿಸಲು ಸಜ್ಜಾಗಿದ್ದಾರೆ.
ಗಮನ ಸೆಳೆದಿರುವ ಪ್ರಮುಖ ಕ್ಷೇತ್ರಗಳು
ಮೊದಲ ಹಂತದ ಚುನಾವಣೆಯಲ್ಲಿ ಸೆರೈಕೆಲ್ಲಾ, ರಾಂಚಿ, ಜಮ್‌ಶೆಡ್‌ಪುರ ಪಶ್ಚಿಮ, ಜಗನ್ನಾಥಪುರ ಮತ್ತು ಜೆಮ್‌ಶೆಡ್‌ಪುರ ಪೂರ್ವ ಕ್ಷೇತ್ರಗಳು ಹಲವು ಕಾರಣಗಳಿಂದ ಸಾಕಷ್ಟು ಗಮನ ಸೆಳೆದಿವೆ.
ಸೆರೈಕೆಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ 2005 ರಿಂದ ಕೇವಲ ಒಬ್ಬರನ್ನು ಮಾತ್ರ ಆಯ್ಕೆ ಮಾಡಿದೆ. ಚಂಪೈ ಸೊರೆನ್ ಇಲ್ಲಿ ಆರು ಬಾರಿ ಶಾಸಕರಾಗಿದ್ದಾರೆ. ಸೋರೆನ್ ಅವರು ಬಿಹಾರದಲ್ಲಿ ಎರಡು ಬಾರಿ ಮತ್ತು ಜಾರ್ಖಂಡ್‌ನಲ್ಲಿ ನಾಲ್ಕು ಬಾರಿ ಸೇವೆ ಸಲ್ಲಿಸಿದ್ದಾರೆ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸಂಸ್ಥಾಪಕ ಶಿಬು ಸೊರೆನ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರು ಜನವರಿ 2024 ರಲ್ಲಿ, ಹೇಮಂತ್ ಸೊರೆನ್ ಬಂಧನದ ಬಳಿಕ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು, ಬಳಿಕ ಜೆಎಂಎಂ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.












Click it and Unblock the Notifications