Jharkhand Election 2024: ಬಿಜೆಪಿ ಇತರ ರಾಜ್ಯಗಳ ನಾಯಕರು ರಣಹದ್ದುಗಳಂತೆ- ಹೇಮಂತ್ ಸೊರೆನ್
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿಲ್ಲ. ಅದಾಗಲೇ ಪ್ರಬಲ ಪಕ್ಷಗಳ ತಯಾರಿ ಜೋರಾಗಿದೆ. ಪರಸ್ಪರ ಆರೋಪ ಪ್ರತ್ಯಾರೋಪ ಶುರುವಾಗಿದೆ. ಈ ಮಧ್ಯೆ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಲೇವಾಡಿ ಮಾಡಿದ್ದಾರೆ.
ಹೌದು... ಜಾರ್ಖಂಡ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷಗಳ ಪ್ರಚಾರ ಶುರುವಾಗಿದೆ. ಹೀಗಾಗಿ ಮಾತಿನ ದಾಳಿ ಕೂಡ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆಯ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಟೀಕಿಸಿದ್ದಾರೆ. ಯಾತ್ರೆಗಾಗಿ ಬಿಜೆಪಿ ಹಿರಿಯ ನಾಯಕರು ಜಾರ್ಖಂಡ್‌ಗೆ ಆಗಮಿಸುತ್ತಿರುವುದನ್ನು ಅವರು ಹದ್ದಿಗೆ ಹೋಲಿಕೆ ಮಾಡಿದ್ದಾರೆ.

ಬೇರೆ ರಾಜ್ಯಗಳ ನಾಯಕರು ಇಲ್ಲಿ ರಣಹದ್ದುಗಳಂತೆ ಸುಳಿದಾಡುತ್ತಿದ್ದಾರೆ ಎಂದು ಸೊರೆನ್ ಅವರು ಬಿಜೆಪಿಯನ್ನು ಕೆಣಕಿದ್ದರು. ಇವರ ಹೇಳಿಕೆಯಿಂದ ರಾಜ್ಯದಲ್ಲಿ ರಾಜಕೀಯ ಬಿಸಿ ಹೆಚ್ಚಾಗಿದೆ. ಸಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಪ್ರತುಲ್ ಶಹದೇವ್, ಜಾರ್ಖಂಡ್ ಅನ್ನು ಹದ್ದುಗಳು ಮತ್ತು ರಣಹದ್ದುಗಳಂತೆ ತಮ್ಮ ಸರ್ಕಾರ ಲೂಟಿ ಮಾಡಿ ತುಂಡರಿಸಿದೆ. ನಮ್ಮ ಪಕ್ಷ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ. ಹಾಗಾಗಿ ನಮ್ಮ ನಾಯಕರು ಜಾರ್ಖಂಡ್ ಗೆ ಬರುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಮತ್ತು ಕಲ್ಪನಾ ಸೊರೆನ್ ಮಾತ್ರ ಕಾಣುತ್ತಿದ್ದಾರೆ. ಬೇರೆ ಯಾರೂ ಇಲ್ಲ ಎಂದು ಪ್ರತುಲ್ ಶಾಹದೇವ್ ಟೀಕೆ ಮಾಡಿದ್ದಾರೆ.
ಇತ್ತ ಸಿಎಂ ಹೇಳಿಕೆಗೆ ಜೆಎಂಎಂ ವಕ್ತಾರ ಮನೋಜ್ ಪಾಂಡೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ಮೋಸಗಾರರು. ಜಾರ್ಖಂಡ್‌ಗೆ ಬರುವಾಗ, ಹೇಮಂತ್ ಬಿಸ್ವಾ ಶರ್ಮಾ ಬುಡಕಟ್ಟು ಜನಾಂಗದವರ ಬಗ್ಗೆ ಮಾತನಾಡುತ್ತಾರೆ. ಆದರೆ ಅಸ್ಸಾಂನಲ್ಲಿ ಆ ಬುಡಕಟ್ಟು ಜನಾಂಗದವರ ಸ್ಥಿತಿ ಕೆಟ್ಟದಾಗಿದೆ. ಅವರು ಅವರ ರಾಜ್ಯದಲ್ಲಿ ಆ ಜನಾಂಗದವರ ಬಗ್ಗೆ ಕಾಳಜಿ ವಹಿಸಬೇಕು. ಆದರೆ ಇಲ್ಲಿ ಬಂದು ದೊಡ್ಡವರಾಗಲು ಹೋಗುತ್ತಾರೆ ಎಂದು ಮನೋಜ್ ಪಾಂಡೆ ಹೇಳಿದರು.
ಜಾರ್ಖಂಡ್‌ನ ಜನರಿಗೆ ಅವರ ಪರಿಚಯವೇ ಇಲ್ಲ. ಜಾರ್ಖಂಡ್ ಜನರಿಗೆ ಹೇಮಂತ್ ಸೋರೆನ್ ಮಾತ್ರ ಗೊತ್ತು. ಇವರು ಬಂದು ಪ್ರಚಾರ ಮಾಡಿದರೆ ಯಾರು ಹೆದರುವುದಿಲ್ಲ. ಜಾರ್ಖಂಡ್‌ನ ಆದಿವಾಸಿಗಳು ನಮ್ಮನ್ನು ಗೆಲ್ಲಿಸುವ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಮನೋಜ್ ಪಾಂಡೆ ಹೇಳಿದರು.
ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಕಮಲ್ ಠಾಕೂರ್, ಮುಖ್ಯಮಂತ್ರಿ ಹೇಳಿದ್ದು ಸಂಪೂರ್ಣ ಸರಿ. ಜಾರ್ಖಂಡ್ ನಲ್ಲಿ ಬಿಜೆಪಿ ನಾಯಕರು ಹಣಕಾಸಿನ ದಾಳಿ ನಡೆಸಿದ್ದಾರೆ. ಜಾರ್ಖಂಡ್‌ಗೆ ಭೇಟಿ ನೀಡುತ್ತಿರುವ ಈ ಜನರು ಸರ್ಕಾರದ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆ ರಣಹದ್ದುಗಳು ಜಾರ್ಖಂಡ್ ಕಿತ್ತು ತಿನ್ನುತ್ತಿವೆ. ಎಲ್ಲೆಲ್ಲಿ ಚುನಾವಣೆ ನಡೆದರೂ ಬಿಜೆಪಿಯ ಹಣದಾಟ ಸ್ಪಷ್ಟವಾಗಿದೆ. ಆದ್ದರಿಂದ ಈ ಜನರು ಜಾರ್ಖಂಡ್ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ, ಆದರೆ ಅವರ ಹಣದ ಆಟ ಇಲ್ಲಿ ನಡೆಯುವುದಿಲ್ಲ. ಇಲ್ಲಿ ಸುಳಿದಾಡುವ ರಣಹದ್ದುಗಳೆಲ್ಲ ಮತ್ತೆ ಹಾರಿ ಹೋಗಬೇಕಾಗುತ್ತದೆ ಎಂದು ಕಾಂಗ್ರೆಸ್ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications