Jharkhand Election: ಪಕ್ಷದಲ್ಲಿ ಭಿನ್ನಾಭಿಪ್ರಾಯ ಇಲ್ಲ; ಎನ್‌ಡಿಎ ಗೆಲುವು ಸಾಧಿಸುತ್ತದೆ ಎಂದ ಬಿಜೆಪಿ ಕಾರ್ಯಾಧ್ಯಕ್ಷ
ಜಾರ್ಖಂಡ್ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಅದೇ ಉತ್ಸಾಹದಲ್ಲಿ ಜಾರ್ಖಂಡ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ. ಆದರೆ ಕಳೆದ ವಾರವಷ್ಟೇ ಬಿಜೆಪಿ ಜಾರ್ಖಂಡ್ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವ ಮಾಜಿ ಸಚಿವ ರವೀಂದ್ರ ಕುಮಾರ್ ರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಹೇಳಿರುವ ಅವರು, ರಾಜ್ಯದಲ್ಲಿ ಬೃಹತ್ ಯೋಜನೆಗಳನ್ನು ಆರಂಭಿಸಿರುವುದು ಜೆಎಂಎಂ ನೇತೃತ್ವದ ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರ ಎನ್ನುವುದು ಜನಕ್ಕೆ ಅರಿವಾಗಿದೆ ಎಂದು ಹೇಳಿದರು. ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎನ್ನುವ ವದಂತಿಗಳನ್ನು ನಿರಾಕರಿಸಿದ ಅವರು, ಪಕ್ಷದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿದರು.

ಕೇಂದ್ರದ ನಾಯಕರು ನನಗೆ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾರಣ ನನಗೆ ಜವಾಬ್ದಾರಿ ವಹಿಸಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ಕೊಟ್ಟ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಕೇಂದ್ರದ ನಾಯಕರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಯಾವ ಬಂಡಾಯವೂ ಇಲ್ಲ
ನನಗೆ ಟಿಕೆಟ್ ಕೊಟ್ಟಿಲ್ಲ ಎಂದು ಬಂಡಾಯವೆದ್ದು ಬೇರೆ ಪಕ್ಷಕ್ಕೆ ಹೋಗುವುದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಎನ್ನುವುದೆಲ್ಲ ಸತ್ಯಕ್ಕೆ ದೂರವಾದ ಮಾತು. ಎನ್‌ಡಿಎ ಒಕ್ಕೂಟವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದು ನನ್ನ ಮೊದಲ ಗುರಿಯಾಗಿದೆ ಎಂದು ಹೇಳಿದ್ದಾರೆ. ಹೇಮಂತ್ ಸೊರೇನ್ ನೇತೃತ್ವದ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ, ಉತ್ತಮ ಸರ್ಕಾರವನ್ನು ಆಯ್ಕೆ ಮಾಡಲು ಅವರಿಗೆ ಅವಕಾಶ ಸಿಕ್ಕಿದ್ದು, ಜನ ಎನ್‌ಡಿಎಗೆ ಅವಕಾಶ ಕೊಡುತ್ತಾರೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಪ್ರಚಾರ
ಜಾರ್ಖಂಡ್ ಚುನಾವಣೆಗಾಗಿ ಭರ್ಜರಿ ಪ್ರಚಾರ ನಡೆಯುತ್ತಿದ್ದು ಪ್ರಮುಖ ನಾಯಕರು ಜಾರ್ಖಂಡ್‌ನಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ನವೆಂಬರ್ 4 ರಂದು ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್‌ಗೆ ಭೇಟಿ ನೀಡಲಾಗಿದ್ದಾರೆ. ಗಹ್ವಾರ್ ಮತ್ತು ಚೈಬಾಸಾ ಜಿಲ್ಲೆಗಳಲ್ಲಿ ಸಾರ್ವಜನಿಕ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮೊದಲು ನವೆಂಬರ್ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಮೂರು ಚುನಾವಣಾ ಸಭೆಗಳಲ್ಲಿ ಭಾಗವಹಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಜಾರ್ಖಂಡ್‌ನ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಜಾರ್ಖಂಡ್‌ನ 81 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 13 ರಂದು ಮೊದಲ ಹಂತದಲ್ಲಿ ಮತ್ತು ನವೆಂಬರ್ 20 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications