Jana Nayagan: ನಟ, ರಾಜಕಾರಣಿ ವಿಜಯ್ ಸಿನಿಮಾ "ಜನ ನಾಯಗನ್"ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ
ನವದೆಹಲಿ: ನಟ, ರಾಜಕಾರಣಿ ವಿಜಯ್ ಅವರು ನಟಿಸಿರುವ ಜನ ನಾಯಗನ್ ಚಿತ್ರಕ್ಕೆ ಮತ್ತೆ ಹಿನ್ನಡೆ ಆಗಿದೆ. ನಟ ವಿಜಯ್ ಅವರು ಜನ ನಾಯಗನ್ ತಮ್ಮ ಕೊನೆಯ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ಅವರು ಈ ಸಿನಿಮಾಗೆ ಸಂಬಂಧಿಸಿದಂತೆ ಸೆನ್ಸಾರ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೀಗ ಜನ ನಾಯಗನ್ ಸಿನಿಮಾದ ಸೆನ್ಸಾರ್ ಸಂಬಂಧಿತ ವಿವಾದದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ನಿರ್ಮಾಪಕರು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ.
ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಈ ಹಿಂದೆ ಪ್ರಕರಣವನ್ನು ನಿಭಾಯಿಸಿದ ವಿಧಾನವನ್ನು ಪ್ರಶ್ನಿಸಿ, ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ನಡೆಸಿತ್ತು. ಇದೀಗ ಸಿನಿಮಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಆಗಿದ್ದು, ಸಂಕ್ರಾಂತಿ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ನಿರೀಕ್ಷೆಯಲ್ಲಿದ್ದ ಚಿತ್ರತಂಡ ನಿರಾಸೆಗೆ ಒಳಗಾಗಿದೆ.

ಹೈಕೋರ್ಟ್ ಈ ಸಿನಿಮಾಗೆ ಸಂಬಂಧಿಸಿದ ಅರ್ಜಿಯನ್ನು ತರಾತುರಿಯಲ್ಲಿ ವಜಾಗೊಳಿಸಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಆದಾಗ್ಯೂ, ನ್ಯಾಯಾಲಯಗಳು ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್ ಪೀಠವು ಅಭಿಪ್ರಾಯಪಟ್ಟಿದ್ದು. ಅಲ್ಲದೇ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡಿದ ನ್ಯಾಯಾಧೀಶರು ಮೆಚ್ಚುಗೆಗೆ ಅರ್ಹರು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಮದ್ರಾಸ್ ಹೈಕೋರ್ಟ್ ಹಂತದಲ್ಲೇ ಪರಿಹರಿಸಿಕೊಳ್ಳಿ
ಇನ್ನು ಜನ ನಾಯಗನ್ ಸಿನಿಮಾಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ನಾವು ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಲ್ಲಾ ದೂರುಗಳನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲೇ ಸಲ್ಲಿಸುವಂತೆ ಪೀಠವು ಪ್ರೊಡಕ್ಷನ್ ಹೌಸ್‌ಗೆ ಸಲಹೆ ನೀಡಿದೆ. ಇನ್ನು ಜನವರಿ 20 ರಂದು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ಈ ವಿಷಯವನ್ನು ಆಲಿಸಿ ನಿರ್ಧರಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ಜನವರಿ 9ರಂದು ತೆರೆ ಕಾಣಬೇಕಿದ್ದ ಸಿನಿಮಾ
ಇನ್ನು ಜನ ನಾಯಗನ್ ಸಿನಿಮಾವೂ ಇದೇ ಜನವರಿ 9ರಂದು ಬಿಡುಗಡೆಯಾಗಬೇಕಾಗಿತ್ತು. ನಿರ್ಮಾಪಕರು ಜನವರಿ 9ರಂದು ಜನ ನಾಯಗನ್ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೇ ತಮಿಳುನಾಡಿನಲ್ಲಿ 5,000ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಕಾಯ್ದಿರಿಸಲಾಗಿತ್ತು. ಗಣನೀಯ ಪ್ರಚಾರ ವೆಚ್ಚಗಳನ್ನು ಭರಿಸಿದ್ದೇವೆ ಮತ್ತು ವಿಳಂಬದಿಂದಾಗಿ ತುಂಬಾ ಆರ್ಥಿಕ ನಷ್ಟವನ್ನು ಅನುಭವಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಆದಾಗ್ಯೂ, ಅಂತಹ ಎಲ್ಲಾ ಮನವಿಗಳನ್ನೂ ಹೈಕೋರ್ಟ್ ಮುಂದೆ ಇಡಬೇಕು ಎಂದು ಪೀಠವು ಹೇಳಿದ್ದು, ಅರ್ಜಿ ಸ್ವೀಕಾರ ಸಾಧ್ಯವಿಲ್ಲ ಎಂದು ಹೇಳಿದೆ.
ಏನಿದು ಜನ ನಾಯಗನ್ ವಿವಾದ
ತಮಿಳು ನಟ ಹಾಗೂ ರಾಜಕಾರಣಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಜನ ನಾಯಗನ್ ಚಿತ್ರವನ್ನು ಜನವರಿ 9 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರದರ್ಶನಕ್ಕೆ ಸೂಕ್ತವೆಂದು ಪ್ರಮಾಣೀಕರಿಸದ ನಂತರ ಅದನ್ನು ತಡೆಹಿಡಿಯಲಾಗಿದೆ.












Click it and Unblock the Notifications