Jammu & Kashmir Election: ಕಣಿವೆ ರಾಜ್ಯದಲ್ಲಿ ಶಾಂತಿಯುತ ಮತದಾನ; ಕ್ಷೇತ್ರವಾರು ಮತದಾನ ವಿವರ
ಒಂದು ದಶಕದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಏಳು ಜಿಲ್ಲೆಗಳ 24 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮತದಾರರು ಉತ್ಸಾಹದಿಂದಲೇ ಮತದಾನ ಮಾಡಿದ್ದಾರೆ. ಪುಲ್ವಾಮದಲ್ಲಿ ಮತದಾರರು ಚುನಾವಣೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ, ಉಳಿದ ಕಡೆ ಮತದಾನದ ಪ್ರಮಾಣ ತಕ್ಕಮಟ್ಟಿಗೆ ಉತ್ತಮವಾಗಿದೆ ಎನ್ನಬಹುದು.
ಸಂಜೆ 6 ಗಂಟೆಗೆ ಮತದಾನದ ಸಮಯ ಮುಕ್ತಾಯವಾಗಿದ್ದು ಅಂದಾಜು ಅಂತಿಮ ಮತದಾನದಲ್ಲಿ 7.30 ಕ್ಕೆ 58.85% ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಕಿಶ್ತ್ವಾರ್ ಕ್ಷೇತ್ರದಲ್ಲಿ 77.23% ಮತದಾನವಾಗಿದ್ದು ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ. ದೋಡಾ ವಿಧಾನಸಭಾ ಕ್ಷೇತ್ರದಲ್ಲಿ 69.33% ಮತದಾನವಾಗಿದೆ. ರಾಂಬನ್ 67.71%. ಕುಲ್ಗಾಂನಲ್ಲಿ 59.62%, ಅನಂತನಾಗ್ 54.17%, ಶೋಪಿಯಾನ್ 53.64%, ಮತ್ತು ಪುಲ್ವಾಮಾದಲ್ಲಿ 43.87% ರಷ್ಟು ಮತದಾನವಾಗಿದೆ. ಮುಖ್ಯ ಚುನಾವಣಾಧಿಕಾರಿ ಪಿ.ಕೆ. ಪೋಲ್‌ರವರ ಪ್ರಕಾರ, ಇದು ಕಳೆದ 35 ವರ್ಷಗಳಲ್ಲೇ ಅತಿ ಹೆಚ್ಚು ಮತದಾನವಾಗಿದೆ.

ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿ ವಿಧಾನಸಭೆ ಚುನಾವಣೆಗೆ ಸಾಕ್ಷಿಯಾಗಿರುವುದು ಇದೇ ಮೊದಲು. ಕಳೆದ ಬಾರಿ 2014ರಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. 7 ಜಿಲ್ಲೆಗಳಲ್ಲಿ 24 ಕ್ಷೇತ್ರಗಳಲ್ಲಿ 3,276 ಮತದಾನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿತ್ತು.
ಮೊದಲ ಹಂತದ ಚುನಾವಣೆಯಲ್ಲಿ 219 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ 9 ಮಹಿಳಾ ಅಭ್ಯರ್ಥಿಗಳಿದ್ದಾರೆ. ಇಂದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ಮತದಾನದ ದಿನವೇ, ಚುನಾವಣಾ ಆಯೋಗವು ₹124.3 ಕೋಟಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿದೆ. ಹಣ ಮಾತ್ರವಲ್ಲದ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಪೂರೈಕೆ ಮತ್ತು ವಿತರಣೆಯ ಮೇಲೆ ಚುನಾವಣಾ ಆಯೋಗ ಕ್ರಮ ತೆಗೆದುಕೊಂಡಿದ್ದು, ₹107.9 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ಸುಗಮವಾಗಿ ಮುಂದುವರೆಯಿತು ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಮೊದಲ ಹಂತದಲ್ಲಿ 3,276 ಮತಗಟ್ಟೆಗಳಲ್ಲಿ 14,000 ಮತಗಟ್ಟೆ ಸಿಬ್ಬಂದಿ ಸುಗಮ ಮತದಾನ ನಡೆಸಲು ಕೆಲಸ ಮಾಡಿದ್ದಾರೆ.
ಎರಡನೇ ಹಂತದಲ್ಲಿ 26 ಕ್ಷೇತ್ರಗಳಲ್ಲಿ ಸೆಪ್ಟೆಂಬರ್ 25ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 1 ರಂದು ಮೂರನೇ ಹಂತದಲ್ಲಿ 40 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಈ ಬಾರಿ ಶತಪ್ರಯತ್ನ ಮಾಡುತ್ತಿದೆ. ಇಂಡಿಯಾ ಒಕ್ಕೂಟ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವ ಉತ್ಸಾಹದಲ್ಲಿದೆ.












Click it and Unblock the Notifications