Lok sabha election: ಜಲಂಧರ್ ಕ್ಷೇತ್ರದ ಕದನ ಕುತೂಹಲ
ನವದೆಹಲಿ, ಮೇ 27: ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಜೂನ್ 1ರ ಶನಿವಾರ ನಡೆಯಲಿದೆ. ಕೊನೆಯ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪಂಜಾಬ್‌ನ ಜಲಂಧರ್ ಕ್ಷೇತ್ರವೂ ಸಹ ಒಂದು. ಈ ಕ್ಷೇತ್ರದ ಕದನ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ.
ಜಲಂಧರ್ ಭಾರತದ ಮಾಜಿ ಪ್ರಧಾನಿ ಐ. ಕೆ. ಗುಜ್ರಾಲ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಕಾಂಗ್ರೆಸ್, ಬಿಜೆಪಿ, ಎಎಪಿ ಪಕ್ಷಗಳು ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಲು ತಂತ್ರ ರೂಪಿಸಿವೆ. ಕ್ಷೇತ್ರ ಹಾಲಿ ಬಿಜೆಪಿ ವಶದಲ್ಲಿದ್ದು, ಸುಶೀಲ್ ರಿಂಕು ಸಂಸದರು. 2024ರ ಚುನಾವಣೆಗೂ ಇವರೇ ಪಕ್ಷದ ಅಭ್ಯರ್ಥಿ.

ಈ ಬಾರಿಯ ಚುನಾವಣೆಯಲ್ಲಿ ಜಲಂಧರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ. ಎಎಪಿ ಎರಡು ಬಾರಿಯ ಶಾಸಕ ಪವನ್ ಕುಮಾರ್ ತಿನು ಕಣಕ್ಕಿಳಿಸಿದೆ. ಶಿರೋಮಣಿ ಅಕಾಲಿದಳ ಮೋಹಿಂದರ್ ಸಿಂಗ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
9 ವಿಧಾನಸಭಾ ಕ್ಷೇತ್ರಗಳು: ಜಲಂಧರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 9 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. 16.54 ಲಕ್ಷ ಮತದಾರರು ಇದ್ದಾರೆ. ಇವರಲ್ಲಿ ಶೇ 37ರಷ್ಟು ಮತದಾರರು ಪರಿಶಿಷ್ಟ ಜಾತಿಗೆ ಸೇರುತ್ತಾರೆ. ಕಾಂಗ್ರೆಸ್ ಕ್ಷೇತ್ರ ಗೆಲ್ಲಲೇಬೇಕು ಎಂದು ಚಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಚರಣ್‌ಜಿತ್ ಸಿಂಗ್ ಚನ್ನಿ ಕಣಕ್ಕಿಳಿಸಿದೆ.
ಬಿಜೆಪಿಯ ಅಭ್ಯರ್ಥಿ ಸುಶೀಲ್ ರಿಂಕು ಎಎಪಿ ಪಕ್ಷದವರು ನಾವು ಸಾಮಾನ್ಯ ಜನರು ಎಂದು ಹೇಳುತ್ತಿದ್ದರು. ಈಗ ಅವರು ವಿಐಪಿಗಳಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿ. ಎನ್‌ಡಿಎ ಮೈತ್ರಿಕೂಟದ 10 ವರ್ಷದ ಆಡಳಿತ ನೋಡಿ ಬಿಜೆಪಿ ಬೆಂಬಲಿಸಿ ಎಂದು ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಜಲಂಧರ್‌ನಲ್ಲಿ ಕಾಂಗ್ರೆಸ್‌ನ ಸಂಕೋಥ್ ಚೌಧರಿ ಜಯಗಳಿಸಿದ್ದರು. ಆದರೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಅವರು ಸಾವನ್ನಪ್ಪಿದರು. ಉಪ ಚುನಾವಣೆಯಲ್ಲಿ ಸುಶೀಲ್ ರಿಂಕು ಜಯಗಳಿಸಿದ್ದಾರೆ.
1989 ಮತ್ತು 1998ರಲ್ಲಿ ಭಾರತದ ಪ್ರಧಾನಿ ಐ. ಕೆ. ಗುಜ್ರಾಲ್ ಜಲಂಧರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜನತಾದಳದ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು. ಕಾಂಗ್ರೆಸ್, ಬಿಜೆಪಿ, ಎಎಪಿ ನಡುವೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಬಿಎಸ್‌ಪಿ ಸಹ ಅಭ್ಯರ್ಥಿ ಕಣಕ್ಕಿಳಿಸಿದೆ.
ಪಂಜಾಬ್‌ನ ಎಲ್ಲಾ 13 ಲೋಕಸಭಾ ಕ್ಷೇತ್ರಗಳಿಗೆ ಜೂನ್ 1ರಂದು ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆಯ 7ನೇ ಮತ್ತು ಅಂತಿಮ ಹಂತದ ಮತದಾನ ಅಂದು ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications