Indore Temple Tragedy : ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ: ಸಾವಿನ ಸಂಖ್ಯೆ 35 ಕ್ಕೆ ಏರಿಕೆ, 14 ಜನರ ರಕ್ಷಣೆ
ಇಂದೋರ್ ಮಾರ್ಚ್ 31: ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದ ಘಟನೆಯಲ್ಲಿ ಸಾವಿನ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ ಎಂದು ಇಂದೋರ್ ಜಿಲ್ಲಾಧಿಕಾರಿ ಡಾ.ಇಳಯರಾಜ. ಟಿ ಶುಕ್ರವಾರ ಹೇಳಿದರು.
"ಒಟ್ಟು 35 ಜನರು ಸಾವನ್ನಪ್ಪಿದ್ದಾರೆ, ಒಬ್ಬರು ಕಾಣೆಯಾಗಿದ್ದಾರೆ ಮತ್ತು 14 ಜನರನ್ನು ರಕ್ಷಿಸಲಾಗಿದೆ. ಇಬ್ಬರು ಚಿಕಿತ್ಸೆ ಪಡೆದ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಕಾಣೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಇಂದೋರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. "18 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯು ಗುರುವಾರ ಮಧ್ಯಾಹ್ನ 12:30 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ಇನ್ನೂ ಮುಂದುವರೆದಿದೆ" ಎಂದು ಜಿಲ್ಲಾಧಿಕಾರಿ ಟಿ ಇಳಯರಾಜ ಹೇಳಿದರು.

ಅಧಿಕಾರಿಗಳ ಪ್ರಕಾರ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಜೊತೆಗೆ 75 ಸೇನಾ ಸಿಬ್ಬಂದಿಯ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ. ರಾಮನವಮಿಯಂದು ಮಧ್ಯಪ್ರದೇಶದ ಇಂದೋರ್‌ನ ಪಟೇಲ್ ನಗರ ಪ್ರದೇಶದ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 'ಹವನ'ದ ವೇಳೆ ಮೆಟ್ಟಿಲುಬಾವಿಯ ಮೇಲ್ಛಾವಣಿ ಕುಸಿದ ನಂತರ ಈ ಘಟನೆ ನಡೆದಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಚೌಹಾಣ್ ಅವರೊಂದಿಗೆ ಪರಿಸ್ಥಿತಿ ಅವಲೋಕನ ನಡೆಸಿದರು.

ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಇಂಧೋರ್‌ನಲ್ಲಿ ಸಂಭವಿಸಿದ ದುರ್ಘಟನೆಯಿಂದ ತೀವ್ರ ನೋವಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾಜ್ಯ ಸರ್ಕಾರವು ತ್ವರಿತ ಗತಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ಎಲ್ಲಾ ಪೀಡಿತರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆಗಳು ಇರುತ್ತವೆ" ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಬಾವಿಯಿಂದ ಹೊರ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ನಾಪತ್ತೆಯಾಗಿರುವ ಭಕ್ತರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ದೇವಸ್ಥಾನದ ಆವರಣದಲ್ಲಿದ್ದ ಜನದಟ್ಟಣೆಯೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಬಾವಿಯಿಂದ ನೀರನ್ನು ಹೊರಗೆ ಬಿಡಲಾಗುತ್ತಿದೆ. ವಿಶೇಷ ಉಪಕರಣಗಳ ಬಳಸಿಕೊಂಡು ಜನರನ್ನು ಹಗ್ಗಗಳಿಂದ ಮೇಲಕ್ಕೆತ್ತವ ಕೆಲಸ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು, ರಕ್ಷಣಾ ಕಾರ್ಯಾಚರಣೆ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ, ಅವರ ಶಾಸಕ ಪುತ್ರ ಆಕಾಶ್ ವಿಜಯವರ್ಗಿಯಾ, ಕಾಂಗ್ರೆಸ್ ಶಾಸಕ ಜಿತು ಪಟ್ವಾರಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಪತ್ರಕರ್ತರಿಗೆ ಮಾಹಿತಿ ನೀಡಿದ ಕೈಲಾಶ್ ವಿಜಯವರ್ಗಿಯಾ ಅವರು, "ಬಾವಿಯೊಳಗೆ ಆಮ್ಲಜನಕದ ಬೆಂಬಲ ಮತ್ತು ದೀಪಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications