MiG 21 Crash: ವಾಯುಪಡೆಯ ಮಿಗ್-21 ವಿಮಾನ ಪತನ, 3 ಸಾವು
ಜೈಪುರ, ಮೇ 08; ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ರಾಜಸ್ಥಾನದಲ್ಲಿ ಪತನಗೊಂಡಿದೆ. ಮಿಗ್-21 ಪತನಗೊಂಡ ಮೊದಲ ಪ್ರಕರಣ ಇದಲ್ಲ. ಹಲವಾರು ಬಾರಿ ಈ ಮಾದರಿಯ ಯುದ್ಧ ವಿಮಾನ ಪತನಗೊಂಡಿದ್ದು, ಹಲವರ ಜೀವ ಹಾನಿಯೂ ಆಗಿದೆ.
ಸೋಮವಾರ ರಾಜಸ್ಥಾನದ ಹನುಮಗಢ ಬಳಿಕ ಮಿಗ್-21 ವಿಮಾನ ಪತನಗೊಂಡಿದೆ. ವಿಮಾನದ ಪೈಲೆಟ್ ಸುಕ್ಷಿತವಾಗಿದ್ದಾರೆ. ಆದರೆ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ಮುಂದುವರೆಸಿದ್ದಾರೆ.

ಇಂದು ಬೆಳಗ್ಗೆ ಹಾರಾಟ ಆರಂಭಿಸಿದ್ದ ಮಿಗ್-21 ವಿಮಾನ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ. ವಿಮಾನವು ಬಹ್ಲೋಲ್ ನಗರದ ಮನೆಯೊಂದರ ಮೇಲೆ ಪತನಗೊಂಡಿದೆ. ವಿಮಾನದ ಅವಶೇಷಗಳು ಬಿದ್ದು ಮೂವರು ಮೃತಪಟ್ಟಿದ್ದಾರೆ.
ವಾಯುಪಡೆಯ ಸಾಮಾನ್ಯ ತರಬೇತಿಗಾಗಿ ಸೋಮವಾರ ವಿಮಾನ ಹಾರಾಟ ಆರಂಭಿಸಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ವಿಮಾನ ಪತನಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎಂದು ಶಂಕಿಸಲಾಗಿದೆ. ವಾಯುಪಡೆ ವಿಮಾನ ಪತನದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಿದೆ.

ಪೈಲೆಟ್ ಸುರಕ್ಷಿತ; ವಿಮಾನ ಪತನದ ಸೂಚನೆ ಸಿಕ್ಕ ತಕ್ಷಣ ಪೈಲೆಟ್ ಹೊರಗೆ ಜಿಗಿದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಣಾಪಾಯದಿಂದ ಪರಾಗಿದ್ದಾರೆ. ಭಾರತೀಯ ವಾಯುಪಡೆ ಟ್ವೀಟ್ ಮೂಲಕ ವಿಮಾನ ಪತನಗೊಂಡಿರುವುದನ್ನು ಖಚಿತಪಡಿಸಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದಕ್ಕೆ ಸಂತಾಪ ಸೂಚಿಸಿದೆ.
ಘಟನೆ ಬಗ್ಗೆ ಹನುಮಗಢ ಜಿಲ್ಲಾಧಿಕಾರಿ ರುಕ್ಮಿಣಿ ರಿಯಾರ್ ಮಾಹಿತಿ ನೀಡಿದ್ದು, "ಭಾರತೀಯ ವಾಯುಪಡೆಯ ಮಿಗ್-21 ವಿಮಾನ ರಾಜಸ್ಥಾನದ ಹನುಮಗಢ ಜಿಲ್ಲೆಯಲ್ಲಿ ಪತನಗೊಂಡಿದ್ದು, ಸ್ಥಳದಲ್ಲಿಯೇ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ವಿಮಾನದ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದು ಹೇಳಿದ್ದಾರೆ.
"ಜನರ ಪ್ರಾಣ ಕಾಪಾಡಲು ಪೈಲೆಟ್ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಇಬ್ಬರು ಸ್ಥಳಲ್ಲಿಯೇ ಸಾವನ್ನಪ್ಪಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ" ಎಂದು ಬಿಕನೇರ್ ಪ್ರದೇಶದ ಐಜಿಪಿ ಓಂ ಪ್ರಕಾಶ್ ತಿಳಿಸಿದ್ದಾರೆ.
ವಿಮಾನ ಪತನಗೊಂಡ ಸ್ಥಳದಲ್ಲಿ ಸುಮಾರು 2 ಸಾವಿರ ಜನರು ಸೇರಿದ್ದರಿಂದ ರಕ್ಷಣಾ ಕಾರ್ಯಕ್ಕೆ ತಕ್ಷಣ ಅಡ್ಡಿಉಂಟಾಯಿತು. ಬಳಿಕ ಹೆಚ್ಚಿನ ಪೊಲೀಸ್ ತುಕಡಿ ಕರೆಸಿ, ಜನರನ್ನು ಚದುರಿಸಲಾಯಿತು. ಭಾರತೀಯ ವಾಯುಪಡೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಮಾನ ಪತನದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹ ಮಾಡಿದರು.
ವಿಮಾನದ ಅವಶೇಷಗಳು ಬಿದ್ದು ಮೃತಪಟ್ಟಿರುವ ಇಬ್ಬರು ಮಹಿಳೆಯರು. ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವಿಮಾನ ಪತನಕ್ಕೂ ಮೊದಲು ದೊಡ್ಡ ಶಬ್ದ ಕೇಳಿತು ಎಂದು ಸ್ಥಳೀಯರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮೊದಲು ಶಬ್ದ ಕೇಳಿದೆ. ಬಳಿಕ ಪ್ಯಾರಚೂಟ್ ಕಂಡಿದೆ ಕೆಲವೇ ಕ್ಷಣಗಳಲ್ಲಿ ರತಿ ರಾಮ್ ಎಂಬುವವರ ಮನೆಯ ಮೇಲೆ ವಿಮಾನ ಪತನಗೊಂಡಿದೆ. ಲೀಲಾದೇವಿ ಮತ್ತು ಬಂಟೋ ಕೌರ್ ಎಂಬ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರು.
ವಿಮಾನದ ಅವಶೇಷಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆಗಮಿಸುವ ಮೊದಲೇ ಜನರು ನೀರಿನ ಮೂಲಕ ಬೆಂಕಿ ನಂದಿಸಿದ್ದರು. ಬಳಿಕ ರಕ್ಷಣಾ ಕಾರ್ಯಚರಣೆ ನಡೆಯಿತು.
ಈ ವರ್ಷದ ಜನವರಿಯಲ್ಲಿ ಮಧ್ಯ ಪ್ರದೇಶದಲ್ಲಿ ಸುಖೋಯ್ ಎಸ್‌ಯು 30 ಮತ್ತು ಮಿರಾಜ್ 2000 ವಿಮಾನಗಳು ಅಭ್ಯಾಸದ ವೇಳೆ ಪರಸ್ಪರ ಡಿಕ್ಕಿಯಾಗಿದ್ದವು. ಒಬ್ಬ ಪೈಲೆಟ್ ಈ ಅಪಘಾತದಲ್ಲಿ ಮತಪಟ್ಟಿದ್ದ.












Click it and Unblock the Notifications