India Weather: ಈ ಭಾಗಗಳಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ: ಐಎಂಡಿ ಮುನ್ಸೂಚನೆ
India Weather Forecast: ಬಂಗಾಳಕೊಲ್ಲಿಯ ನೈಋತ್ಯ ಮತ್ತು ಪಕ್ಕದ ಪ್ರದೇಶಗಳಲ್ಲಿ ಕಡಿಮೆ ಒತ್ತಡ ಪ್ರದೇಶವು ರೂಪುಗೊಂಡಿದೆ. ನೆರೆಯ ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲೂ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ ಮೂರು ದಿನಗಳ ಅವಧಿಗೆ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಯಾವ ರೀತಿಯ ಹವಾಮಾನ ಇರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಫೆಬ್ರವರಿ ತಿಂಗಳು ಮುಕ್ತಾಯವಾಗುತ್ತಿರುವಾಗಲೇ ದೇಶದಾದ್ಯಂತ ಹವಾಮಾನದಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ಉತ್ತರ ಭಾರತ ಹಾಗೂ ಮಧ್ಯಭಾರತದ ವಿವಿಧ ಭಾಗದಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದೆ. ಇದೇ ಸಂದರ್ಭದಲ್ಲಿ ಹವಾಮಾನದಲ್ಲಿನ ಬದಲಾವಣೆಗಳಿಂದ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮಳೆ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇನ್ನು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮಳೆ ಆಗುವ ಮುನ್ಸೂಚನೆ ಇದೆ.

ಈ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
ಇನ್ನು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ತಮಿಳುನಾಡು ಮತ್ತು ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಫೆಬ್ರವರಿ 23-26 ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದಂತೆ ಸಾಕಷ್ಟು ವ್ಯಾಪಕವಾದ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.
ಅಲ್ಲದೆ ಮಿಂಚು - ಗುಡುಗು ಸಹಿತ ಗಂಟೆಗೆ 30-40 ರಿಂದ ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ತೆಲಂಗಾಣದಲ್ಲಿಯೂ ಇದೇ ರೀತಿಯ ಹವಾಮಾನ ಪರಿಸ್ಥಿತಿ ಕಂಡುಬರುವ ಸಾಧ್ಯತೆಯಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲೂ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ಉಲ್ಲೇಖಿಸಿದೆ.
ಫೆಬ್ರವರಿ 23 ಮತ್ತು 24 ರಂದು ಒಡಿಶಾದಲ್ಲಿ ಮಿಂಚು - ಗುಡುಗು ಸಹಿತ ಬಿರುಗಾಳಿಯೊಂದಿಗೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಮುಂದುವರಿದು ಅರುಣಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು - ಗುಡುಗು ಸಹಿತ ಧಾರಾಕಾರ ಮಳೆ ಆಗಲಿದೆ.
ಅಸ್ಸಾಂ ಮತ್ತು ಮೇಘಾಲಯ, ಪಶ್ಚಿಮ ಬಂಗಾಳ ಭಾಗದಲ್ಲೂ ಮಳೆ ಆಗಲಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಬಂಗಾಳಕೊಲ್ಲಿಯ ಆಗ್ನೇಯದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ನೈಋತ್ಯ ಬಂಗಾಳಕೊಲ್ಲಿಯ ಹಲವು ಭಾಗಗಳಲ್ಲಿ, ಬಂಗಾಳಕೊಲ್ಲಿಯ ಆಗ್ನೇಯಕ್ಕೆ ಹೊಂದಿಕೊಂಡಿರುವ ಮತ್ತು ಪಕ್ಕದ ಶ್ರೀಲಂಕಾ ಕರಾವಳಿಯಲ್ಲಿ ಗಂಟೆಗೆ 40-50 ಕಿ.ಮೀನಿಂದ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮುಂದಿನ ಏಳು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನವು 3ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ವರದಿ ಉಲ್ಲೇಖ ಮಾಡಿದೆ.
ಭಾರತದ ರಾಜಧಾನಿ ದೆಹಲಿಯಲ್ಲಿ ಹೇಗಿದೆ ಹವಾಮಾನ
ದೆಹಲಿಯಲ್ಲಿ ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಸುಮಾರು ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಆದಾಗ್ಯೂ, ನಂತರ ಯಾವುದೇ ಪ್ರಮುಖ ಬದಲಾವಣೆಗಳು ಇಲ್ಲ. ಉತ್ತರ ಭಾರತದಾದ್ಯಂತ ವಾರವಿಡೀ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ, ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.












Click it and Unblock the Notifications