Very Very Worry: ಭಾರತದಲ್ಲಿ ಕೊರೊನಾವೈರಸ್ ಸಾವಿನ ಸಂಖ್ಯೆ ಏರಿಕೆ!
ನವದೆಹಲಿ, ಜೂನ್,17: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಲಕ್ಷಲಕ್ಷ ಏರಿಕೆಯಾದರೂ ಭಾರತೀಯರು ಭಯಪಡಬೇಕಿಲ್ಲ. ದೇಶದಲ್ಲಿ ಸೋಂಕಿನಿಂದ ಪ್ರಾಣ ಬಿಟ್ಟವರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ ಅಂದುಕೊಂಡಿದ್ದ ಭಾರತೀಯರಿಗೆ ಆಘಾತಕಾರಿ ವಿಚಾರವೊಂದು ಹೊರಬಿದ್ದಿದೆ.
ಭಾರತದಲ್ಲಿ ನಿಧಾನಗತಿಯಲ್ಲಿ ಕೊರೊನಾವೈರ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಕೊವಿಡ್-19 ಸೋಂಕಿತರ ಸಾವಿನ ಪ್ರಮಾಣ ಜೂನ್.03ರಿಂದ ಈಚೆಗೆ ಶೇ.2.8ರಿಂದ 3.36ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!
ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತರ ಪೈಕಿ ಶೇ.5ರಷ್ಟು ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಈ ಅಂಕಿ-ಅಂಶಗಳನ್ನು ಗಮನಿಸಿದಾಗ ಭಾರತವು ಉತ್ತಮ ಸ್ಥಿತಿಯಲ್ಲೇನೋ ಇದೆ. ಆದರೆ ದೇಶದ ಹಲವು ರಾಜ್ಯಗಳಲ್ಲಿ ಸಾವಿನ ಪ್ರಮಾಣವನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ಪುನರ್ ಅವಲೋಕನ ನಡೆಸುವುದಕ್ಕೆ ಮುಂದಾಗಿವೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಾವಿನ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾವೈರಸ್ ಸೋಂಕು ಮತ್ತು ಸಾವಿನ ಸಂಖ್ಯೆ
ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಭಾರತದಲ್ಲಿ ಬರೋಬ್ಬರಿ 2003 ಮಂದಿ ಉಸಿರು ಚೆಲ್ಲಿದ್ದಾರೆ. ದೇಶಾದ್ಯಂತ ಒಂದೇ ದಿನ 10,974 ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗಿವೆ. ಇದುವರೆಗೂ ಒಟ್ಟು 3,54,065 ಮಂದಿಗೆ ಸೋಂಕು ಅಂಟಿಕೊಂಡಿದ್ದು, ಈ ಪೈಕಿ 1,86,935 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 1,55,227 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ನಾಲ್ಕು ರಾಜ್ಯಗಳಲ್ಲಿ ಅತಿಹೆಚ್ಚು ಮಂದಿ ಕೊವಿಡ್-19ಗೆ ಬಲಿ
ಬುಧವಾರದ ಅಂಕಿ-ಅಂಶದ ಪ್ರಕಾರ 1,98,837 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಪೈಕಿ 11,903 ಮಂದಿ ಪ್ರಾಣ ಬಿಟ್ಟಿದ್ದರೆ 1,86,934 ಸೋಂಕಿತರು ಗುಣಮುಖರಾಗಿದ್ದಾರೆ. ಈ ಸಂಖ್ಯೆಗಳ ಆಧಾರದ ಮೇಲೆ, ಇತ್ಯರ್ಥಗೊಂಡ ಪ್ರಕರಣಗಳ ಮೇಲೆ ಲೆಕ್ಕ ಹಾಕಿದರೆ ಚೇತರಿಕೆಯ ಪ್ರಮಾಣವು ನಾಟಕೀಯವಾಗಿ ಶೇಕಡಾ 94ಕ್ಕೆ ಏರಿಕೆಯಾಗುತ್ತದೆ. ಸರ್ಕಾರದ ಪ್ರಸ್ತುತ ಅಂಕಿ ಅಂಶವು ಶೇಕಡಾ 52.8 ರಷ್ಟಿದೆ, ಇದು ಒಟ್ಟು ವರದಿಯಾದ ಪ್ರಕರಣಗಳ ಲೆಕ್ಕಾಚಾರವಾಗಿದೆ.

ಸಾವಿನ ಸಂಖ್ಯೆ ಪರಿಶೋಧಕ ಸಮಿತಿಯಲ್ಲಿ ಉಲ್ಲೇಖ
ಒಂದೇ ದಿನ 2003 ಮಂದಿ ಕೊರೊನಾವೈರಸ್ ಮಹಾಮಾರಿಗೆ ಬಲಿಯಾಗಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ 1409, ನವದೆಹಲಿಯಲ್ಲಿ 437, ತಮಿಳುನಾಡಿನಲ್ಲಿ 49 ಹಾಗೂ ಹರಿಯಾಣದಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ನವದೆಹಲಿಯಲ್ಲಿ 1400 ಇದ್ದ ಸಾವಿನ ಸಂಖ್ಯೆ ಇದೀಗ 1839ಕ್ಕೆ ಏರಿಕೆಯಾಗಿದೆ ಎಂದು ಕೊರೊನಾ ವೈರಸ್ ಸೋಂಕಿತರ ಸಾವಿನ ಸಂಖ್ಯೆಯ ಬಗ್ಗೆ ಲೆಕ್ಕ ಪರಿಶೋಧಕ ಸಮಿತಿಯು ಉಲ್ಲೇಖಿಸಿದೆ. ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಮತ್ತಷ್ಟು ಆತಂಕ ಹುಟ್ಟಿಸಿದೆ.

ಶೇ.52.8 ಕೊರೊನಾವೈರಸ್ ಸೋಂಕಿತರ ಗುಣಮುಖ
ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಕೊರೊನಾವೈರಸ್ ಸೋಂಕಿತರ ಪೈಕಿ ಶೇ.52.8ರಷ್ಟು ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವವರ ಸಂಖ್ಯೆಯನ್ನಷ್ಟೇ ಇದು ಒಳಗೊಂಡಿದೆ. ಆದರೆ ತಜ್ಞರ ಪ್ರಕಾರ ಇತ್ಯರ್ಥಗೊಂಡ ಪ್ರಕರಣಗಳನ್ನು ಒಟ್ಟು ಪ್ರಕರಣಗಳ ಜೊತೆಗೆ ಹೋಲಿಕೆ ಮಾಡಿ ಲೆಕ್ಕ ಹಾಕಬೇಕು. ಹಾಗೆ ನೋಡಿದ್ದಲ್ಲಿ ಶೇ.94ರಷ್ಟು ಸೋಂಕಿತರ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿರುವುದು ಬೆಳಕಿಗೆ ಬರುತ್ತದೆ.