ಹೈದರಾಬಾದ್: ಇನ್ಫಿ ಐಟಿ ಮ್ಯಾನೇಜರ್ ಆತ್ಮಹತ್ಯೆ
ಹೈದರಾಬಾದ್, ಸೆ.12: ಇಲ್ಲಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಐಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 35 ವರ್ಷದ ಶೈಲೇಂದ್ರನೀಲ್ಕರ್ ಅವರು ಬುಧವಾರ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ.
ಕುಕಟ್ ಪಲ್ಲಿಯ ಮೂಸಾಪೇಟ್ ನಲ್ಲಿರುವ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ ನ 19ನೇ ಮಹಡಿಯಿಂದ ಶೈಲೇಂದ್ರ ಹಾರಿ ಸಾವನ್ನಪ್ಪಿದ್ದಾರೆ. ಈ ಅಪಾರ್ಟ್ಮೆಂಟ್ ನಲ್ಲಿ ಹೊಸ ಮನೆಯನ್ನು ಶೈಲೇಂದ್ರ ಖರೀದಿಸಿದ್ದರು. ಬುಧವಾರ ಮನೆ ಮಾಲೀಕರೊಡನೆ ಮಾತನಾಡಿದ ನಂತರ ತಾವು ಖರೀದಿಸಿದ ಭಾಗವನ್ನು ನೋಡಲು ಒಬ್ಬರೇ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಡೆತ್ ನೋಟ್ ಸುಳಿವು: ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೂಸಾಪೇಟ್ ಕಡೆಗೆ ಹೊರಟ ಶೈಲೇಂದ್ರ ತನ್ನ ಪತ್ನಿಗೆ ಸೈಬರ್ ಸಿಟಿಗೆ ಹೋಗುತ್ತಿದ್ದೇನೆ. ಮನೆ ನಿರ್ಮಾಣದ ಬಗ್ಗೆ ವಿಚಾರಿಸಿಕೊಂಡು ಬರುತ್ತೇನೆ ಎಂದಿದ್ದಾರೆ.
ಕೆಳ ಅಂತಸ್ತಿನಲ್ಲಿರುವ ಕಟ್ಟಡದ ಮಾಲೀಕರ ಬಳಿ ಮಾತನಾಡಿದ ನಂತರ ನಿಧಾನವಾಗಿ 19ನೇ ಮಹಡಿ ತನಕ ಏರಿದ ಶೈಲೇಂದ್ರ ಯಾರೂ ಗಮನಿಸುತ್ತಿಲ್ಲ ಎಂದು ದೃಢಪಡಿಸಿಕೊಂಡ ನಂತರ ಮೇಲಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.
ಶೈಲೇಂದ್ರ ಅವರ ಶವದ ಬಳಿ ಒಂದು ಡೆತ್ ನೋಟ್ ಸಿಕ್ಕಿದ್ದು 'ನನ್ನ ಸಾವಿಗೆಯಾರು ಕಾರಣರಲ್ಲ.ನನ್ನ ಸಾವಿಗೆ ನಾನೇ ಕಾರಣ. ನಿಮ್ಮೆಲ್ಲರೂ ತುಂಬಾ ಪ್ರೀತಿಸುತ್ತೇನೆ' ಎಂದು ಬರೆಯಲಾಗಿದೆ ಜತೆಗೆ ಕೆಲವು ಫೋನ್ ನಂಬರ್ ಗಳನ್ನು ನೀಡಲಾಗಿದೆ ಎಂದು ಕುಕಟ್ ಪಲ್ಲಿ ಠಾಣೆ ಇನ್ಸ್ ಪೆಕ್ಟರ್ ಎಸ್ ಚಂದ್ರಕಾಂತ್ ಅವರು ಹೇಳಿದ್ದಾರೆ.

ಮಾನಸಿಕ ಖಿನ್ನತೆ ಕಾರಣವೇ?: ಶೈಲೇಂದ್ರ ಅವರು ಸಿಕಂದರಾಬಾದ್ ನ ಸಿಖ್ ಗ್ರಾಮದವರಾಗಿದ್ದಾರೆ. ಶೈಲೇಂದ್ರ ಅವರು ಪತ್ನಿ ರೀಮಾ ಹಾಗೂ ನಾಲ್ಕು ವರ್ಷದ ಅವಳಿ ಮಕ್ಕಳಾದ ರಿತಿಕ್ ಹಾಗೂ ರಿತಿಕಾ ಅವರನ್ನು ಅಗಲಿದ್ದಾರೆ. ಇತ್ತೀಚೆಗಷ್ಟೇ ಸೈಬರ್ ಸಿಟಿಯ ಅಪಾರ್ಟ್ಮೆಂಟ್ ನಲ್ಲಿ ಬ್ಲಾಕ್ 803 ಎಂದು ಕರೆಯಲ್ಪಡುವ ರೈನೋ ವಿಸ್ತಾ ಅಪಾರ್ಟ್ಮೆಂಟ್ ನಲ್ಲಿ ಮನೆ ಖರೀದಿಸಿದ್ದರು.
ಆದರೆ, ಇತ್ತೀಚೆಗೆ ಕೆಲಸದ ಒತ್ತಡದಿಂದ ಮನೆಯಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ. ಕುಟುಂಬದ ಶುಭ ಸಮಾರಂಭಗಳಲ್ಲೂ ಅನ್ಯಮನಸ್ಕರಾಗಿ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಶೈಲೇಂದ್ರ ಅವರಿಗೆ ಹೇಳಿಕೊಳ್ಳುವಂಥ ಆರ್ಥಿಕ ಸಮಸ್ಯೆ ಏನೂ ಇರಲಿಲ್ಲ.
ಆದರೆ, ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣವಾಯಿತೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಆರ್ ಪಿಸಿ ಸೆಕ್ಷನ್ 174 ಪ್ರಕಾರ ಶವವನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಕಟ್ ಪಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಾಜು ಯಾದವ್ ಹೇಳಿದ್ದಾರೆ.












Click it and Unblock the Notifications