Cyclone Hamoon: ಕೇರಳದಲ್ಲಿ ವರುಣನ ಆರ್ಭಟ- ಭಾರತದ ಈ ರಾಜ್ಯಗಲ್ಲಿ ಮಳೆ ಸಾಧ್ಯತೆ, ಮಾಹಿತಿ, ವಿವರ
ಹಮೂನ್ ಚಂಡಮಾರುತವು ಮುಂದಿನ ಆರು ಗಂಟೆಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ. ಆದರೂ, ದೇಶದ ಕೆಲ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
'ಹಮೂನ್ ಚಂಡಮಾರುತವು ಆಗ್ನೇಯ ಬಾಂಗ್ಲಾದೇಶ ಮತ್ತು ಮಿಜೋರಾಂನ ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತವು ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ' ಎಂದು ಹಮಾಮಾನ ಇಲಾಖೆ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಮಣಿಪುರ, ಮಿಜೋರಾಂ, ತ್ರಿಪುರಾ, ದಕ್ಷಿಣ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶದಲ್ಲಿ ಗುರುವಾರದವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಶ್ಚಿಮ ಬಂಗಾಳದ ದಿಘಾ, ಬಾಂಗ್ಲಾದೇಶದ ಖೆಪುಪಾರಾ ಮತ್ತು ಚಿತ್ತಗಾಂಗ್ ಮೇಲೆ ಸೈಕ್ಲೋನಿಕ್ ಚಂಡಮಾರುತವು ಮಂಗಳವಾರ ಸುಳಿದಾಡಿದೆ. ಬಳಿಕ ಚಂಡಮಾರುತ ದುರ್ಬಲಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇರಳದಲ್ಲಿ ಭಾರೀ ಮಳೆ
ಈಶಾನ್ಯ ಮುಂಗಾರು ಆರಂಭವಾದ ಬೆನ್ನಲ್ಲೇ ಕೇರಳದಲ್ಲಿ ಗುಡುಗು ಹಾಗೂ ಸಿಡಿಲು ಸಹಿತ ಎಡೆಬಿಡದೆ ಮಳೆಯಾಗುತ್ತಿದೆ. ಅಕ್ಟೋಬರ್ 28 ರ ವರೆಗೆ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಇಡುಕ್ಕಿಯ ಕಲ್ಲಾರ್ ಅಣೆಕಟ್ಟಿನ ನೀರಿನ ಮಟ್ಟ ಅಪಾಯಕಾರಿಯಾಗಿ ಏರುತ್ತಿದೆ. ನದಿ ತೀರದಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಡುಕ್ಕಿಯಲ್ಲಿ ಭೂಕುಸಿತ
ಇಡುಕ್ಕಿಯ ನೆಡುಂಕಂಡಂನಲ್ಲಿ ಮಂಗಳವಾರ 3 ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿದಿದೆ. ಪರಿಣಾಮ ಇಲ್ಲಿನ ಪಚಾಡಿ ಶಿಬಿರದಲ್ಲಿ ಭೂಕುಸಿತ ಸಂಭವಿಸಿದೆ.
ನೆಡುಂಕಂಡಂನಲ್ಲಿ ಭೂಕುಸಿತದಿಂದ ಒಂದು ಎಕರೆ ಕೃಷಿ ಭೂಮಿ ಕೊಚ್ಚಿ ಹೋಗಿದೆ. ಪಚಾಡಿಯ ವಿನೋದ್ ಎಂಬುವವರ ಜಮೀನಿನಲ್ಲಿ ಭೂಕುಸಿತದಿಂದ ಕಾಫಿ, ಕಾಳುಮೆಣಸು, ಬಾಳೆ ಸೇರಿದಂತೆ ಬೆಳೆಗಳು ನಾಶವಾಗಿವೆ.

2018ರಲ್ಲಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದರು. ಇದೇ ಸ್ಥಳದ ಸಮೀಪ ಭೂಕುಸಿತ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರದೇಶದಲ್ಲಿನ 25 ಕುಟುಂಬಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಆದೇಶಿಸಿದೆ.
ಮೇಕಟ್ಟುಕಡವ್ - ಅಚ್ಚಂಕಡ ರಸ್ತೆಯಲ್ಲಿ ನೀರಿನ ಬಲವಾದ ರಭಸಕ್ಕೆ ಮಣ್ಣು ಕೊಚ್ಚಿ ಹೋಗಿದೆ. ಇದು ಅಪಾಯದ ಸ್ಥಿತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಚೆಟ್ಟುಕುಝಿ-ಕುಂಬಂ ಮೆಟ್ಟು ರಸ್ತೆಯಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿದೆ.
ಇದೇ ವೇಳೆ ನಾಪತ್ತೆಯಾಗಿದ್ದ ಕಲ್ಲಂಬಲಂ ಮೂಲದ ವ್ಯಕ್ತಿಯ ಮೃತದೇಹ ಕೊಚ್ಚುಕರಿಂತರುವಿ ನದಿಯಲ್ಲಿ ಪತ್ತೆಯಾಗಿದೆ. ಕರುಣಾಪುರಂ ಮೂರನೇ ಕ್ಯಾಂಪ್‌ನಲ್ಲಿ ಸೋಮವಾರ ಸಿಡಿಲು ಮತ್ತು ಗುಡುಗು ಸಹಿತ ಮಳೆಯಿಂದಾಗಿ ತಂದೆ ಮತ್ತು ಮಗ ಗಾಯಗೊಂಡಿದ್ದಾರೆ.
ಕೊಚ್ಚಿ-ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯ ನೆರಿಯಮಂಗಲಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ 6 ಗಂಟೆಯಿಂದ ಭಾರಿ ಮಳೆಯಾಗಿದೆ. ಬೆಟ್ಟದ ತುದಿಯಿಂದ ರಸ್ತೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದಿದೆ. ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ವಾಲಾರದಿಂದ ನೆರಿಯಮಂಗಲಕ್ಕೆ ಸಂಚರಿಸುವುದು ದುಸ್ತರವಾಗಿದೆ.
ಮುಲ್ಲಪೆರಿಯಾರ್ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ನೀರಿನ ಮಟ್ಟ 123.75 ಅಡಿಗಳಿಗೆ ಏರಿಕೆಯಾಗಿದೆ. ಇದು ಅಪಾಯದ ಮಟ್ಟ ತಲುಪುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications