ಮುಂದಿನ ಮೂರು ದಿನಗಳ ಅವಧಿ ಈ ರಾಜ್ಯಗಳಲ್ಲಿ ಅತ್ಯಧಿಕ ಮಳೆ
ನವದೆಹಲಿ, ಸೆಪ್ಟೆಂಬರ್ 9: ಮುಂದಿನ ಮೂರು ದಿನಗಳ ಕಾಲ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಗುಜರಾತ್, ಒಡಿಶಾ, ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.
ವಾಯುಭಾರ ಕುಸಿತ ಹಾಗೂ ಪಶ್ಚಿಮ ವಾಯವ್ಯ ದಿಕ್ಕಿನೆಡೆಗೆ ಚಲನೆಯ ಪ್ರಭಾವದ ಅಡಿಯಲ್ಲಿ, ಪಶ್ಚಿಮ ಕರಾವಳಿಯುದ್ದಕ್ಕೂ ಮಾರುತಗಳು ಬಲಗೊಳ್ಳಲಿದ್ದು, ಈ ಅವಧಿಯಲ್ಲಿ ಉತ್ತರ ಕೊಂಕಣ, ದಕ್ಷಿಣ ಗುಜರಾತ್, ಒಡಿಶಾ, ಛತ್ತೀಸ್‌ಗಡದಲ್ಲಿ ವ್ಯಾಪಕ ಮಳೆಯಾಗುವುದಾಗಿ ತಿಳಿಸಿದೆ. ಸೆಪ್ಟೆಂಬರ್ 12 ಹಾಗೂ 13ರಂದು ಹೆಚ್ಚಿನ ಮಳೆಯಾಗುವುದಾಗಿ ಇಲಾಖೆ ಮಾಹಿತಿ ನೀಡಿದೆ. ಮುಂದೆ ಓದಿ...

ಸೆಪ್ಟೆಂಬರ್ 12ರವರೆಗೂ ಮಳೆ ಮುಂದುವರಿಕೆ
ಮಧ್ಯ ಪ್ರದೇಶದ ಪಶ್ಚಿಮ ಭಾಗದಲ್ಲಿ ಚಂಡಮಾರುತ ಪ್ರಭಾವದಿಂದಾಗಿ ಗುಜರಾತ್, ರಾಜಸ್ಥಾನ ಹಾಗೂ ಮಧ್ಯ ಪ್ರದೇಶದಲ್ಲಿ ಸೆಪ್ಟೆಂಬರ್ 9ರಿಂದ 12ರವರೆಗೂ ಮಳೆ ಮುಂದುವರೆಯಲಿದೆ.
ಹರಿಯಾಣ, ನೈಋತ್ಯ ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 10-11ರಂದು ಮಳೆ ಚುರುಕು ಪಡೆಯಲಿರುವುದಾಗಿ ತಿಳಿಸಿದೆ. ಉತ್ತರಾಖಂಡ, ಜಮ್ಮು, ಹಿಮಾಚಲ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಮೇಲೆ ಹೆಚ್ಚಾಗಲಿದ್ದು, ಈ ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗುವುದಾಗಿ ತಿಳಿಸಲಾಗಿದೆ. ಹೀಗಾಗಿ ಒಡಿಶಾದ ಹನ್ನೊಂದು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ.

ಮುಂಬೈನಲ್ಲಿ ಭಾರೀ ಮಳೆ
ಸೆಪ್ಟೆಂಬರ್ 12ರ ನಂತರವೂ ದೇಶದ ಹಲವು ಕಡೆಗಳಲ್ಲಿ ಮಳೆ ಮತ್ತಷ್ಟು ಬಿರುಸು ಪಡೆಯಲಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ 13ರಂದು ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವುದಾಗಿ ತಿಳಿಸಿದೆ.
ಮಹಾರಾಷ್ಟ್ರದ ಪುಣೆ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಈ ವಾರವಿಡೀ ಮುಂಬೈನಲ್ಲಿ ಅಧಿಕ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಥಾಣೆ, ಪಾಲ್ಗಾರ್ ಸೇರಿ ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಂಕಣ ಹಾಗೂ ಗೋವಾಗೆ ಅತ್ಯಧಿಕ ಮಳೆಯಾಗುವ ಸೂಚನೆಯಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಕೂಡ ಸಾಮಾನ್ಯ ಮಳೆ ಮುಂದುವರೆಯುದಾಗಿ ತಿಳಿಸಿದೆ.
ತೆಲಂಗಾಣದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಸುಮಾರು ಎಂಟು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

ಸೆಪ್ಟೆಂಬರ್ ಮಳೆಯಿಂದ ಖಾರಿಫ್ ಬೆಳೆಗಳಿಗೆ ಹಾನಿ
ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ದಾಖಲಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿಯುವ ಮಳೆಯಿಂದಾಗಿ ಖಾರಿಫ್ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಭಾರೀ ಮಳೆ ಮುಂದುವರೆದರೆ ಸೋಯಾಬೀನ್, ಕಡಲೆ, ಭತ್ತ, ಜೋಳ, ಹತ್ತಿ ಬೆಳೆಗಳು ನಾಶವಾಗಲಿವೆ ಎಂದು ಕೃಷಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭಾರೀ ಮಳೆಯಿಂದಾಗಿ ಬೆಳೆ ನಾಶವಾಗಿ ಬೆಳೆಗಳ ಬೆಲೆ ಏರಿಕೆಯಾಗಲಿದೆ ಎಂದು ಅಂದಾಜಿಸಿದ್ದಾರೆ.

ಕರ್ನಾಟಕದಲ್ಲಿ ಸೆಪ್ಟೆಂಬರ್ 13ರವರೆಗೂ ಮಳೆ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 13ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ತೀರದಲ್ಲಿ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.












Click it and Unblock the Notifications