ಹನುಮ ಜಯಂತಿ ಪ್ರಯುಕ್ತ ಕೋಲ್ಕತ್ತಾದಲ್ಲಿ ಭಾರಿ ಪೊಲೀಸ್ ಭದ್ರತೆ
ಕೋಲ್ಕತ್ತಾ ಏಪ್ರಿಲ್ 6: ಇಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ರಾಮ ನವಮಿ ವೇಳೆ ನಡೆದ ಹಿಂಸಾಚಾರದ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಇಂದು ಭಾರೀ ಪೊಲೀಸ್ ಬಿಗಿಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಈವರೆಗೆ ಕೋಲ್ಕತ್ತಾದಲ್ಲಿ ಅಂತಹ ಯಾವುದೇ ಘಟನೆಗಳು ವರದಿಯಾಗದಿದ್ದರೂ ಸಹ, ಹನುಮ ಜಯಂತಿಯಂದು ನಗರದಲ್ಲಿ ಶಾಂತಿಯನ್ನು ಕಾಪಾಡಲು ಮತ್ತು ಯಾವುದೇ ಅಹಿತರ ಘಟನೆ ನಡೆಯದಂತೆ ಎಚ್ಚರ ವಹಿಸಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹನುಮ ಜಯಂತಿಯಂದು ಕೋಲ್ಕತ್ತಾದ ಬೀದಿಗಳಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಆರು ಮೆರವಣಿಗೆಗಳನ್ನು ಮಾಡಲು ಸ್ಥಳೀಯರು ನಿರ್ಧಾರ
ಪೊಲೀಸ್ ಮೂಲಗಳ ಪ್ರಕಾರ, ಕೋಲ್ಕತ್ತಾದಲ್ಲಿ ಸುಮಾರು ಆರು ಮೆರವಣಿಗೆಗಳನ್ನು ಮಾಡಲು ನಿರ್ಧರಿಸಲಾಗಿದೆ. ನಗರದ ಸುಮಾರು 80 ದೇವಾಲಯಗಳಲ್ಲಿ ಹನುಮಾನ್ ಪೂಜೆಯನ್ನು ಮಾಡಲಾಗುತ್ತದೆ. ಹೀಗಾಗಿ ಪ್ರತಿ ಮೆರವಣಿಗೆಗೆ ಪೊಲೀಸ್ ಪಡೆ ಬೆಂಗಾವಲು ಪಡೆ ಇರಲಿದೆ.
ಪ್ರತಿ ಮೆರವಣಿಗೆಯಲ್ಲಿ ಕೋಲ್ಕತ್ತಾ ಪೊಲೀಸ್‌ನ ಹೆಚ್ಚುವರಿ ಕಮಿಷನರ್ ಮತ್ತು ಡೆಪ್ಯುಟಿ ಕಮಿಷನರ್ ಶ್ರೇಣಿಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಸಮವಸ್ತ್ರಕ್ಕೆ ಬಾಡಿ ಕ್ಯಾಮೆರಾಗಳನ್ನು ಜೋಡಿಸಲಾಗಿದೆ.
ಇದಲ್ಲದೆ, ಪ್ರತಿ ಮೆರವಣಿಗೆಯನ್ನು ಪೊಲೀಸರು ವೀಡಿಯೊ ಟೇಪ್ ಮಾಡುತ್ತಾರೆ. ನಗರದಲ್ಲಿ ಯಾವುದೇ ಅಹಿತಕರ ಸಂದರ್ಭಗಳನ್ನು ತಪ್ಪಿಸಲು ಅಗತ್ಯಬಿದ್ದರೆ ಬ್ಯಾರಿಕೇಡ್‌ಗಳು ಮತ್ತು ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

50 ಸ್ಥಳಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕಣ್ಗಾವಲು
ಕಣ್ಗಾವಲುಗಾಗಿ ನಗರದಾದ್ಯಂತ 50 ಸ್ಥಳಗಳಲ್ಲಿ ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕಲ್ಕತ್ತಾ ಹೈಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಯಾವುದೇ ರೀತಿಯ ಅಹಿತಕರ ಸಂದರ್ಭಗಳನ್ನು ತಪ್ಪಿಸಲು ಕೋಲ್ಕತ್ತಾದಲ್ಲಿ ಕೇಂದ್ರ ಪಡೆಗಳ ಒಂದು ತಂಡವನ್ನೂ ನಿಯೋಜಿಸಲು ನಿರ್ಧರಿಸಲಾಗಿದೆ.
ಹೌರಾ, ನಿಮ್ತಾಲಾ, ಶಂಭುನಾಥ ಪಂಡಿತ್ ರಸ್ತೆ ಮತ್ತು ಬ್ರಹ್ಮ ಸಮಾಜ ಲೇನ್‌ನಲ್ಲಿ ಗುರುವಾರ ಪ್ರತ್ಯೇಕ ಹನುಮ ಜಯಂತಿ ಮೆರವಣಿಗೆಗಳನ್ನು ಮಾಡಲು ನಿರ್ಧರಿಸಲಾಗಿದೆ. ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಪ್ರತಿ ಮೆರವಣಿಗೆಯಲ್ಲಿ ಗರಿಷ್ಠ ನೂರು ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.
ಬೆಳಗ್ಗೆ ಮತ್ತು ಸಂಜೆ ಮಾತ್ರ ಮೆರವಣಿಗೆಗೆ ಅನುಮತಿ
ಎಲ್ಲಾ ಮೆರವಣಿಗೆಗಳಲ್ಲಿ ಸ್ವಯಂಸೇವಕರು ಇರುತ್ತಾರೆ ಮತ್ತು ಅವರಿಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ವಿಶೇಷ ಗುರುತಿನ ಚೀಟಿ ನೀಡಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಇದೇ ವೇಳೆ ಹನುಮ ಜಯಂತಿ ಪೂಜೆ ನಡೆಯುವ ದೇವಸ್ಥಾನಗಳಿಗೂ ಕೂಡ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಡೆಪ್ಯುಟಿ ಕಮಿಷನರ್‌ಗಳು ಆಯಾ ಪ್ರದೇಶಗಳಲ್ಲಿ ಜಾಗರೂಕತೆ ವಹಿಸುತ್ತಾರೆ ಮತ್ತು ಅಗತ್ಯ ಬಿದ್ದರೆ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಈಗಾಗಲೇ ಕೋಲ್ಕತ್ತಾ ಪೊಲೀಸರ ಮೋಟಾರ್‌ಸೈಕಲ್ ಗಸ್ತು ಪಡೆ ನಗರವನ್ನು ಸುತ್ತುತ್ತಿದೆ. ಅಲ್ಲದೆ ಸೂಕ್ಷ್ಮ ಸ್ಥಳದಲ್ಲಿ
ಕ್ವಿಕ್ ರೆಸ್ಪಾನ್ಸ್ ಟೀಮ್, ಹೆವಿ ರೇಡಿಯೋ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೊಲೀಸ್ ಕಂಟ್ರೋಲ್ ರೂಂ ವ್ಯಾನ್ ಗಳನ್ನು ಸ್ಥಾಪಿಸಲಾಗಿದೆ.
ಬಂಗಾಳದ ಹೌರಾ ಮತ್ತು ಹೂಗ್ಲಿ ಜಿಲ್ಲೆಗಳು ರಾಮನವಮಿ ಸಂದರ್ಭದಲ್ಲಿ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದವು. ಹಲವಾರು ಸರ್ಕಾರಿ ಆಸ್ತಿಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ನಂತರದ ಹಿಂಸಾಚಾರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಸಾಮಾನ್ಯ ಜನರು ಗಾಯಗೊಂಡಿದ್ದಾರೆ. ಹೀಗಾಗಿ ಹನುಮಾನ್ ಜಯಂತಿಯಾದ ಇಂದು ಇಂತಹ ಯಾವುದೇ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಗಲಭೆ ಸೃಷ್ಟಿಸುವುದು ಕಂಡು ಬಂದರೆ ಖಾಕಿ ತಕ್ಕ ಶಾಸ್ತಿ ಮಾಡುವುದು ಪಕ್ಕ.












Click it and Unblock the Notifications