ಕಾಶ್ಮೀರವನ್ನು ಪಾಕ್ ಗೆ ನೋಡಿಕೊಳ್ಳಲು ಆಗಲ್ಲ ಎಂಬ ಮಾತು ಸರಿಯಿದೆ: ಸಿಂಗ್
ಪಾಕಿಸ್ತಾನ್ ಕ್ರಿಕೆಟರ್ ಶಾಹಿದ್ ಅಫ್ರಿದಿ ಸರಿಯಾಗಿಯೇ ಹೇಳಿದ್ದಾರೆ. ಅದರ ಈಗಿನ ಪ್ರಾಂತ್ಯಗಳನ್ನೇ ನಿಭಾಯಿಸಲು ಆಗುತ್ತಿಲ್ಲ, ಅಂಥದ್ದರಲ್ಲಿ ಕಾಶ್ಮೀರ ನಮಗೆ ಬೇಡ ಎಂದು ಅಫ್ರಿದಿ ಹೇಳಿದ್ದರು. ಅವರ ಮಾತು ಸರಿಯಾಗಿಯೇ ಇದೆ ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
"ಅವರು ಹೇಳಿದ್ದು ಸರಿಯಾಗಿದೆ. ಅವರಿಗೆ ಪಾಕಿಸ್ತಾನವನ್ನು ಸಂಭಾಳಿಸುವುದೇ ಕಷ್ಟವಾಗಿದೆ, ಅದು ಹೇಗೆ ಕಾಶ್ಮೀರವನ್ನು ನಿರ್ವಹಿಸುತ್ತಾರೆ? ಕಾಶ್ಮೀರ ಈಗಲೂ ಮತ್ತು ಇನ್ನು ಮುಂದೆಯೂ ಭಾರತದ ಭಾಗವೇ" ಎಂದು ರಾಜ್ ನಾಥ್ ಸಿಂಗ್ ಹೇಳಿರುವುದಾಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಕಾಶ್ಮೀರದ ಬಗ್ಗೆ ನೀಡಿದ ಹೇಳಿಕೆ ಮೂಲಕ ಅಫ್ರಿದಿ ವಿವಾದವೊಂದನ್ನು ಕೆದಕಿದ್ದಾರೆ. ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದ ವಿಡಿಯೋದಲ್ಲಿ, ಕಾಶ್ಮೀರವನ್ನು ಸ್ವತಂತ್ರ ರಾಷ್ಟ್ರವಾಗಿ ಉಳಿಯಲು ಪಾಕಿಸ್ತಾನ ಬಿಡಬೇಕು. ಏಕೆಂದರೆ, ಈಗಿರುವ ನಾಲ್ಕು ಪ್ರಾಂತ್ಯವನ್ನೇ ಸಂಭಾಳಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ ಎಂದು ಹೇಳಿದ್ದರು.

ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಿಲ್ಲ. ಹಾಗಂತ ಭಾರತಕ್ಕೂ ಬಿಟ್ಟುಕೊಡಬೇಡಿ. ಕಾಶ್ಮೀರ ಸ್ವತಂತ್ರವಾಗಿರಲಿ. ಕನಿಷ್ಠ ಪಕ್ಷ ಮಾನವೀಯತೆ ಜೀವಂತ ಉಳಿದುಕೊಳ್ಳುತ್ತದೆ. ಜನರು ಪ್ರಾಣ ಕಳೆದುಕೊಳ್ಳದಿರಲಿ. ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ. ಅದಕ್ಕೆ ತನ್ನ ನಾಲ್ಕು ಪ್ರಾಂತ್ಯದ ಆಡಳಿತವೇ ಕಷ್ಟವಾಗಿದೆ. ದೊಡ್ಡ ವಿಷಯ ಬಂದು ಮಾನವೀಯತೆ. ಜನರು ಅಲ್ಲಿ ಸಾಯುತ್ತಿದ್ದಾರೆ. ಅದು ನೋವಿನ ಸಂಗತಿ. ಯಾವುದೇ ಸಾವು, ಅದು ಯಾವುದೇ ಧರ್ಮದವರಾಗಿರಲಿ ಅದು ನೋವಿನ ಸಂಗತಿ ಎಂದು ಅಫ್ರಿದಿ ಹೇಳಿದ್ದರು.












Click it and Unblock the Notifications