ಹರಿಯಾಣದಲ್ಲಿ ವೈದ್ಯರು ಜೀನ್ಸ್, ಸ್ಕರ್ಟ್ ಧರಿಸದಂತೆ ಆದೇಶ
ಹರಿಯಾಣದಲ್ಲಿ ವೈದ್ಯರು ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಮತ್ತು ಸ್ಕರ್ಟ್‌ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಚಂಡೀಗಢ, ಫೆಬ್ರವರಿ 10: ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಲ್ಲಿ ಏಕರೂಪತೆಯನ್ನು ತರಲು ಮತ್ತು ರೋಗಿಗಳಿಗೆ ಸಿಬ್ಬಂದಿಯನ್ನು ಗುರುತಿಸಲು ಸಹಾಯ ಮಾಡಲು ಹೊಸ ಡ್ರೆಸ್ ಕೋಡ್ ನೀತಿಯನ್ನು ಹರಿಯಾಣ ಸರ್ಕಾರ ಜಾರಿಗೆ ತಂದಿದೆ.
ಈ ನೀತಿಯ ಪ್ರಕಾರ ವೈದ್ಯರು ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಮತ್ತು ಸ್ಕರ್ಟ್‌ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ವೈದ್ಯರು ಮೇಕಪ್ ಅಥವಾ ಭಾರವಾದ ಆಭರಣಗಳನ್ನು ಧರಿಸುವಂತಿಲ್ಲ. ಪುರುಷರು ತಮ್ಮ ಶರ್ಟ್ ಕೊರಳಪಟ್ಟಿಗಿಂತಲೂ ಉದ್ದವಾಗಿ ಕೂದಲನ್ನು ಬೆಳೆಸದಂತೆ ತಿಳಿಸಲಾಗಿದೆ. ಅಲ್ಲದೆ ಮಹಿಳಾ ವೈದ್ಯರಿಗೆ ತಮ್ಮ ಉಗುರುಗಳನ್ನು ಉದ್ದವಾಗಿ ಬೆಳೆಸದಂತೆ ಸೂಚಿಸಲಾಗಿದೆ.
ಫೆಬ್ರವರಿ 9 ರಂದು ಹೊರಡಿಸಲಾದ ನೀತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತಿಳಿಸಲಾಗಿದೆ. ಡ್ರೆಸ್ ಕೋಡ್ ಅನ್ನು ಅನುಸರಿಸದೆ ಇದ್ದರೆ ಅಂತಹವರನ್ನು ಕರ್ತವ್ಯಕ್ಕೆ ಗೈರುಹಾಜರೆಂದು ಪರಿಗಣಿಸಲಾಗುತ್ತದೆ ಮತ್ತು ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಡ್ರೆಸ್ ಕೋಡ್ ಅನ್ನು ಏಕೆ ಪರಿಚಯಿಸಲಾಗಿದೆ ಎಂದು ವಿವರಿಸಿದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್, "ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ರೋಗಿಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಸಿಬ್ಬಂದಿಗೆ ಡ್ರೆಸ್ ಕೋಡ್ ಅನ್ನು ಜಾರಿ ಮಾಡಲಾಗಿದೆ. ಇದು ಸಿಬ್ಬಂದಿ ಸದಸ್ಯರ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ರೋಗಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಸಮವಸ್ತ್ರಗಳನ್ನು ವಿನ್ಯಾಸಕರು ವಿನ್ಯಾಸಗೊಳಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ ಆಸ್ಪತ್ರೆ ಸಿಬ್ಬಂದಿ ಏಕರೂಪ ಡ್ರೆಸ್ ಕೋಡ್ ಪಾಲಿಸಬೇಕು ಎಂದು ಹೇಳಿದ್ದೆ. ನಾವು ಯಾವುದೇ ಖಾಸಗಿ ಆಸ್ಪತ್ರೆಗೆ ಹೋದಾಗಲೆಲ್ಲಾ ಒಬ್ಬ ಆಸ್ಪತ್ರೆಯ ಸಿಬ್ಬಂದಿಯೂ ಸಮವಸ್ತ್ರವಿಲ್ಲದೆ ಕಾಣಿಸುವುದಿಲ್ಲ, ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಯನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ ಎಂದು ವಿಜ್ ಹೇಳಿದರು.
ಯಾವುದೇ ಬಣ್ಣವನ್ನು ಲೆಕ್ಕಿಸದೆ ಡೆನಿಮ್ ಜೀನ್ಸ್ ಧರಿಸುವಂತಿಲ್ಲ. ಇದು ಸ್ವೆಟ್ ಶರ್ಟ್‌ಗಳು, ಡೆನಿಮ್ ಸ್ಕರ್ಟ್‌ಗಳು, ಶಾರ್ಟ್ಸ್, ಸ್ಟ್ರೆಚ್ ಮಾಡಬಹುದಾದ ಟೀ ಶರ್ಟ್‌ಗಳು ಅಥವಾ ಪ್ಯಾಂಟ್‌ಗಳು, ದೇಹವನ್ನು ಅಪ್ಪಿಕೊಳ್ಳುವ ಪ್ಯಾಂಟ್‌ಗಳು, ಸೊಂಟದವರೆಗಿನ ಟಾಪ್‌ಗಳು, ಸ್ಟ್ರಾಪ್‌ಲೆಸ್ ಟಾಪ್‌ಗಳು, ಬ್ಯಾಕ್‌ಲೆಸ್ ಟಾಪ್‌ಗಳು, ಕ್ರಾಪ್-ಟಾಪ್‌ಗಳು, ಡೀಪ್ ನೆಕ್ ಟಾಪ್‌ಗಳು, ಆಫ್ ಶೋಲ್ಡರ್ ಬ್ಲೌಸ್ ಮತ್ತು ಸ್ನೀಕರ್ಸ್‌ಗಳನ್ನು ನಿರ್ಬಂಧಿಸುತ್ತದೆ ಎಂದು ನೀತಿ ಹೇಳುತ್ತದೆ ಎಂದು ತಿಳಿಸಿದರು.
ಈ ನೀತಿಯು ಭದ್ರತಾ ಸಿಬ್ಬಂದಿ, ವಾಹನ ಚಾಲಕರು, ನೈರ್ಮಲ್ಯ ಸಿಬ್ಬಂದಿ ಮತ್ತು ಅಡುಗೆಮನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಅನ್ನು ಒಳಗೊಂಡಿದೆ. ಸರಿಯಾದ ಸಮವಸ್ತ್ರವನ್ನು ಧರಿಸುವಂತೆ ತಿಳಿಸಲಾಗಿದೆ.












Click it and Unblock the Notifications