ಒಂದು ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ನಾಲ್ವರು ಘಟಾನುಘಟಿ ನಾಯಕರ ಪೈಪೋಟಿ!
ನವದೆಹಲಿ, ಆಗಸ್ಟ್ 28: ಹರ್ಯಾಣ ವಿಧಾನಸಭೆ ಚುನಾವಣೆ 2024ರ ದಿನಾಂಕ ಘೋಷಣೆಯಾಗಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ 1/10/2024ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಸರತ್ತು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಒಂದೇ ಕ್ಷೇತ್ರದ ಟಿಕೆಟ್‌ಗಾಗಿ ಘಟಾನುಘಟಿ ನಾಯಕರು ಪೈಪೋಟಿ ನಡೆಸುತ್ತಿರುವುದು ಪಕ್ಷದ ಚಿಂತೆ ಹೆಚ್ಚಿಸಿದೆ.
ಬಾದಶಹಪುರ ಹರ್ಯಾಣ ರಾಜ್ಯದ ಒಂದು ವಿಧಾನಸಭಾ ಕ್ಷೇತ್ರ. ರಾಜ್ಯದಲ್ಲಿ ಅತಿ ಹೆಚ್ಚು ಮತದಾರರು ಇರುವ ಕ್ಷೇತ್ರವಿದು. 4.5 ಲಕ್ಷ ಮತದಾರರು ಈ ಕ್ಷೇತ್ರದಲ್ಲಿ ಇದ್ದಾರೆ. ಕ್ಷೇತ್ರದ ಟಿಕೆಟ್ ಪಡೆಯಲು ಮಾಜಿ ಸಿಎಂ ಆಪ್ತ ಸೇರಿ ಹಲವು ನಾಯಕರು ಪೈಪೋಟಿಯಲ್ಲಿ ತೊಡಗಿದ್ದಾರೆ. ಟಿಕೆಟ್ ಕೈತಪ್ಪಿದರ ನಡೆ ಬಿಜೆಪಿಗೆ ತಲೆನೋವು ತಂದಿದೆ.

ಹರ್ಯಾಣ ವಿಧಾನಸಭೆ ಚುನಾವಣೆ 2024ಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಎರಡು ದಿನದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆದರೆ ಇದಕ್ಕೂ ಮೊದಲು ಬಾದಶಹಪುರ ಕ್ಷೇತ್ರದ ಟಿಕೆಟ್‌ಗಾಗಿ ನಡೆಯುತ್ತಿರುವ ಪೈಪೋಟಿ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಕಾರಣವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಜವಾಹರ್ ಯಾದವ್, ಪಕ್ಷದ ಜಿಲ್ಲಾಧ್ಯಕ್ಷ ಕಮಲ್ ಯಾದವ್, ಮಾಜಿ ಸಚಿವ ನರ್ಬೀರ್ ಸಿಂಗ್ ಸೇರಿ ಹಲವು ನಾಯಕರು ಬಾದಶಹಪುರ ಕ್ಷೇತ್ರದ ಟಿಕೆಟ್‌ಗಾಗಿ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ.
ಬಾದಶಹಪುರ ಕ್ಷೇತ್ರದ ವಿಶೇಷತೆಗಳು: 4.5 ಲಕ್ಷ ಮತದಾರರು ಇರುವ ಬಾದಶಹಪುರ ಕ್ಷೇತ್ರ ಪ್ರತಿಷ್ಠಿತ ಗುರ್‌ಗಾಂವ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 9 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. 2014ರಲ್ಲಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ರಾಕೇಶ್ ದೌಲತ್‌ಬದಾದ್ ಗೆಲುವು ಸಾಧಿಸಿದರು. 2019ರಲ್ಲಿಯೂ ಗೆದ್ದ ಅವರು ಈ ವರ್ಷದ ಮೇ ತಿಂಗಳಿನಲ್ಲಿ ನಿಧನ ಹೊಂದಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ 1.2 ಲಕ್ಷ ಮತಗಳು ಬಂದಿವೆ. ಇದು ಹಲವು ನಾಯಕರು ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಲು ಪ್ರಮುಖ ಕಾರಣವಾಗಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದ 5 ಲೋಕಸಭಾ ಕ್ಷೇತ್ರದಲ್ಲಿ ಗುರ್‌ಗಾಂವ್ ಕ್ಷೇತ್ರವೂ ಒಂದು.
ಬಿಜೆಪಿ ನಾಯಕರ ಲೆಕ್ಕಾಚಾರದಂತೆ ಬಾದಶಹಪುರ ಕ್ಷೇತ್ರದಲ್ಲಿ 1.25 ಲಕ್ಷ ಯಾದವರು, 60 ಸಾವಿರ ಜಾಟ್, 50 ಸಾವಿರ ಎಸ್‌ಸಿ, 35 ಸಾವಿರ ಬ್ರಾಹ್ಮಣರು, 30 ಸಾವಿರ ಪಂಜಾಬಿ ಮತದಾರರು ಇದ್ದಾರೆ. ಉಳಿದಂತೆ ಗುಜ್ಜಾರ್, ರಾಜಪೂತ, ಮುಸ್ಲಿಂ ಸಮುದಾಯದ ಮತಗಳಿವೆ. ಆದ್ದರಿಂದ ಯಾರಿಗೆ ಟಿಕೆಟ್? ಎಂಬ ಲೆಕ್ಕಾಚಾರ ಜೋರಾಗಿದೆ.
ಜವಾಹರ್ ಯಾದವ್ 37 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ತೋರಿಸಿದ್ದಾರೆ. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಸಹ ಪಕ್ಷದ ಸಿದ್ಧಾಂತಕ್ಕಾಗಿ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಕೇತ್ರದಲ್ಲಿ ಯಾದವರ ಮತಗಳು ಹೆಚ್ಚಿರುವುದು ಜವಾಹರ್ ಯಾದವ್ ಬಲವಾಗಿದೆ. ಅವರು ಈಗಾಗಲೇ ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಲು ಆರಂಭಿಸಿದ್ದಾರೆ.












Click it and Unblock the Notifications