Haryana: ಚುನಾವಣೋತ್ತರ ಸಮೀಕ್ಷೆ ಪ್ರಸಾರ ಮಾಡದಂತೆ ಮಾಧ್ಯಮ ನಿರ್ಬಂಧ ವಿಸ್ತರಣೆ
ನವದೆಹಲಿ, ಅಕ್ಟೋಬರ್ 03: ಹರಿಯಾಣ ವಿಧಾನಸಭಾ ಚುನಾವಣೆ 2024ಗೆ ಎರಡೇ ದಿನ ಬಾಕಿ ಇದೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗವು ಚುನಾವಣೋತ್ತರ ಸಮೀಕ್ಷೆಯನ್ನು (Exit Poll) ಪ್ರಸಾರ ಮಾಡದಂತೆ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ಬಂಧವನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಹಾಗಾದರೆ ಯಾವ ಸಮಯದಿಂದ ಎಲ್ಲಿಯವರೆಗೆ ಈ ನಿರ್ಬಂಧ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಹರಿಯಾಣದಲ್ಲಿ ಚುನಾವಣೆಗೆ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಸಾರಕ್ಕೆ ಚುನಾವಣೆ ಆಯೋಗ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ. ಎಲ್ಲ ವಿಧದ ಸುದ್ದಿ ಮಾಧ್ಯಮಗಳು ಪ್ರಸಾರ ಮಾಡದಂತೆ ಕಳೆದ ತಿಂಗಳ ಸೆಪ್ಟೆಂಬರ್ 18 ಬೆಳಗ್ಗೆ 7:00 ಗಂಟೆಯಿಂದ ಮತದಾನ ದಿನವಾದ ಅಕ್ಟೋಬರ್ 05ರಂದು ಸಂಜೆ 6.30ರವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ಹರಿಯಾಣ ಮುಖ್ಯ ಚುನಾವಣಾ ಅಧಿಕಾರಿ ಪಂಕಜ್ ಅಗರವಾಲ್ ತಿಳಿಸಿದ್ದಾರೆ.

ಈ ಮೂಲಕ ಜಮ್ಮು ಹಾಗೂ ಕಾಶ್ಮೀರ ಹಾಗೂ ಹರಿಯಾಣ ರಾಜ್ಯ ಅಸೆಂಬ್ಲಿ ಚುನಾವಣೆ ಪ್ರಕ್ರಿಯೆ, ಮತದಾನ, ಫಲಿತಾಂಶಗಳ ಒಂದಷ್ಟು ಖಚಿತ ಮಾಹಿತಿ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಆದ್ದರಿಂದಲೇ ಚುನಾವಣೊತ್ತರ ಸಮೀಕ್ಷೆಯನ್ನು ಪ್ರಸಾರ ಮಾಡದಂತೆ ಪ್ರಾತಿನಿಧ್ಯ ಕಾಯಿದೆ, 1951 ರ ಸೆಕ್ಷನ್-126 ಎ ಅಡಿಯಲ್ಲಿ ನಿಷೇಧ ಹೇರಿದೆ.
ಇನ್ನೂ ಮತದಾನದ ದಿನದಂದು ಮತದಾನ ಸಂಜೆ ಪೂರ್ಣಗೊಳ್ಳುತ್ತದೆ. ಅದು ಮುಗಿದು 30 ನಿಮಿಷಗಳ ವರೆಗೆ ಯಾವುದೇ ಚುನಾವಣೋತ್ತರ ಸಮೀಕ್ಷೆ ಬಿಡುಗಡೆ ಮಾಡದಂತೆ, ಪ್ರಕಟಿಸಿದಂತೆ ಸೂಚನೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳ ಚುನಾವಣೆ ಮುಗಿದಿದೆ. ಇನ್ನೂ ಅಕ್ಟೋಬರ್ 05ರಂದು ಮತದಾನ ನಡೆಯಲಿದೆ. ಈ ಪ್ರಯುಕ್ತ ನಿರ್ಬಂಧ ಹೇರಿದ್ದು, ಒಂದು ವೇಳೆ ಕಾನೂನು ಉಲ್ಲಂಘಿಸುವವರಿಗೆ ಅಧಿಕ ದಂಡ ವಿಧಿಸಲಾಗುವುದು. ಅಷ್ಟು ಮಾತ್ರವಲ್ಲದೇ ಸೆಕ್ಷನ್ 126A ಉಲ್ಲಂಘನೆ ಆರೋಪದಲ್ಲಿ ವ್ಯಕ್ತಿ ಮತ್ತು ಸಂಸ್ಥೆಗಳ ಮುಖ್ಯಸ್ಥರಿಗೆ ಎರಡು ವರ್ಷ ಜೈಲು ಶಿಕ್ಷೆ, ದಂಡ, ಇಲ್ಲವೇ ಎರಡನ್ನು ವಿಧಿಸಲು ಅವಕಾಶ ಇದೆ.
ಚುನಾವಣೆ ಆಯೋಗ ಮಾರ್ಗಸೂಚಿ ಪಾಲಿಸಬೇಕು
ಪ್ರಜಾಪ್ರಭುತ್ವದಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕತೆಯಿಂದ ಚುನಾವಣಾ ಪ್ರಕ್ರಿಯೆ ನಡೆಯಬೇಕು. ಈ ಮಹತ್ತರ ಉದ್ದೇಶದಿಂದ ಹಾಗೂ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ರಕ್ಷಿಸಲು ಚುನಾವಣೆ ಆಯೋಗ ನೀಡಿದ ಮಾರ್ಗಸೂಚಿಗಳನ್ನು ಮಾಧ್ಯಮಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.
ಹರಿಯಾಣದಲ್ಲಿ ಸದ್ಯ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 08ರಂದು ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಸಂಬಂಧ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಬುಧವಾರವೇ ಅಂತ್ಯಗೊಂಡಿದೆ. ಇನ್ನೇನಿದ್ದರು ಮನೆ ಮನೆ ಪ್ರಚಾರ ನಡೆಸಲು ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಸಜ್ಜಾಗಿವೆ.












Click it and Unblock the Notifications